ನವದೆಹಲಿ: ದೇಶದಾದ್ಯಂತ ಕ್ರೈಸ್ತರು ಹಾಗೂ ಅವರ ಆರಾಧನಾ ಮಂದಿರಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳುವಂತೆ ಕೋರಿ ಬೆಂಗಳೂರು ಆರ್ಚ್‌ಬಿಷಪ್ ಡಾ. ಪೀಟರ್ ಮಚಾಡೋ ಅವರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ನ್ಯಾಯಮೂರ್ತಿಗಳಾದ ಪಿ. ಎಸ್. ನರಸಿಂಹ ಹಾಗೂ ಅಲೋಕ್ ಆರಾಧೆ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ವಿಷಯದ ಕುರಿತು ಇನ್ನಷ್ಟು ಸಮಗ್ರ ಪರಿಶೀಲನೆ ಅಗತ್ಯವಿದೆ ಎಂದು ತಿಳಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು 2026ರ ಆಗಸ್ಟ್ 21ಕ್ಕೆ ಮುಂದೂಡಿದೆ.
ಕ್ರಿಸ್‌ಮಸ್, ಈಸ್ಟರ್ ಸೇರಿದಂತೆ ಪ್ರಮುಖ ಕ್ರೈಸ್ತ ಹಬ್ಬಗಳ ಸಂದರ್ಭದಲ್ಲಿ ಮತಾಂತರ ಆರೋಪಗಳನ್ನು ಮುಂದಿಟ್ಟು ಶಾಂತಿಯುತವಾಗಿ ನಡೆಯುವ ಪ್ರಾರ್ಥನಾ ಸಭೆಗಳಿಗೆ ಅಡ್ಡಿಪಡಿಸುವುದು ಹಾಗೂ ಕ್ರೈಸ್ತ ಕುಟುಂಬಗಳನ್ನು ಬೆದರಿಸುವ ಘಟನೆಗಳು ವಿವಿಧ ರಾಜ್ಯಗಳಲ್ಲಿ ನಡೆಯುತ್ತಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಅರ್ಜಿಯಲ್ಲಿರುವ ಮಾಹಿತಿಯ ಪ್ರಕಾರ, 2025ರಲ್ಲಿ 800ಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ಹಾಗೂ 2026ರ ಮೊದಲಾರ್ಧದಲ್ಲೇ 285 ಹಲ್ಲೆ ಮತ್ತು ದೌರ್ಜನ್ಯ ಘಟನೆಗಳು ದೇಶದಲ್ಲಿ ವರದಿಯಾಗಿವೆ ಎಂದು ತಿಳಿಸಲಾಗಿದೆ.
ಇದೇ ವೇಳೆ, ಹಿಂದಿನ ವರ್ಷಗಳಲ್ಲಿ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಮತಾಂತರ ಆರೋಪಗಳ ಹಿನ್ನೆಲೆಯಲ್ಲಿ ಉಂಟಾದ ಹಿಂಸಾಚಾರದಿಂದ ಅನೇಕ ಕ್ರೈಸ್ತ ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಸ್ಥಳಾಂತರಗೊಳ್ಳಬೇಕಾದ ಗಂಭೀರ ಪರಿಸ್ಥಿತಿಯನ್ನೂ ಆರ್ಚ್‌ಬಿಷಪ್ ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದ್ದಾರೆ.
