ನೀರುಗುಂದ ದುರಂತ: ರಕ್ಷಣಾ ಪಡೆಗಳು ಅಖಾಡಕ್ಕೆ, ನಾಪತ್ತೆಯಾದವರಿಗಾಗಿ ಹಗಲು-ರಾತ್ರಿ ಶೋಧ




ಕೊಡ್ಲಿಪೇಟೆ: ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿರುವ ನೀರುಗುಂದ ಗ್ರಾಮದ ನಾಗರಾಜ್ ಹಾಗೂ ಶಿವರಾಜ್ ಅವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ. ಎನ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ನದಿ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿವೆ.


ಎನ್‌ಡಿಆರ್‌ಎಫ್ ತಂಡದ ಇನ್ಸ್‌ಪೆಕ್ಟರ್ ಕಮಾಂಡರ್ ರಂಬಾಜಿ ಅವರ ನೇತೃತ್ವದಲ್ಲಿ ಎಲ್ಲಪ್ಪ, ಸೌಮ್ಯ ಕುಮಾರ್ ಹಾಗೂ ಇತರ ಸಿಬ್ಬಂದಿಗಳು ಆಧುನಿಕ ರಕ್ಷಣಾ ಸಲಕರಣೆಗಳೊಂದಿಗೆ ಆಳವಾದ ನೀರಿನ ಪ್ರದೇಶಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಇವರೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದು, ನದಿಯ ವಿವಿಧ ಭಾಗಗಳಲ್ಲಿ ಪತ್ತೆ ಕಾರ್ಯ ಮುಂದುವರಿಸಿದ್ದಾರೆ. 



ಕಾರ್ಯಾಚರಣೆಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಹಕಾರ ನೀಡುತ್ತಿದ್ದು, ಸೋಮವಾರಪೇಟೆ ತಾಲೂಕಿನ ಉಪ ಪೊಲೀಸ್ ಅಧೀಕ್ಷಕ (DYSP) ಚಂದ್ರಶೇಖರ್ ಪಿ., ಶನಿವಾರಸಂತೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಚಂದ್ರ ಹೆಚ್.ವೈ., ಸಿಬ್ಬಂದಿಗಳಾದ ಹರ್ಷ, ಮಹೇಶ್, ಸಂತೋಷ್, ಕೊಡ್ಲಿಪೇಟೆ ಉಪಠಾಣೆಯ ಎಎಸ್‌ಐ ಲಕ್ಷ್ಮೀ ಪ್ರಸಾದ್ ರೈ, ಮೂರ್ತಿ ಸೇರಿದಂತೆ ಇತರ ಸಿಬ್ಬಂದಿಗಳು ಸ್ಥಳದಲ್ಲಿದ್ದು ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.


ಇದೇ ವೇಳೆ ಸೋಮವಾರಪೇಟೆ ತಾಲೂಕಿನ ದಂಡಾಧಿಕಾರಿ ಕೃಷ್ಣಮೂರ್ತಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡಿದ್ದು, ಕೊಡ್ಲಿಪೇಟೆ ಕಂದಾಯ ಇಲಾಖೆಯ ಪರಿವೀಕ್ಷಕ ಮನು ಅವರು ಕೂಡ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಕ್ಕೆ ಅಗತ್ಯ ಸಹಕಾರ ನೀಡುತ್ತಿದ್ದಾರೆ.


ಸ್ಥಳೀಯ ಮೀನುಗಾರರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ನಡೆಯುತ್ತಿರುವ ಈ ಜಂಟಿ ಕಾರ್ಯಾಚರಣೆಯಲ್ಲಿ ನಾಪತ್ತೆಯಾಗಿರುವ ಇಬ್ಬರ ಪತ್ತೆಗೆ ರಕ್ಷಣಾ ತಂಡಗಳು ಎಲ್ಲಾ ರೀತಿಯ ಪ್ರಯತ್ನಗಳನ್ನು ಮುಂದುವರಿಸಿವೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW