ಬೆಂಗಳೂರು: ಗೋವಾದಲ್ಲಿ ನಡೆದ ಭಗವಾನ್ ಪರಶುರಾಮ ಜನ್ಮೋತ್ಸವ ಕಾರ್ಯಕ್ರಮದ ವೇಳೆ ಗೌತಮ್ ಕಟ್ಟರ್ ಎಂಬ ವ್ಯಕ್ತಿ ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪ್ರಸಿದ್ಧ ಮಿಷನರಿ ಸಂತ ಫ್ರಾನ್ಸಿಸ್ ಜೇವಿಯರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ವಾಸ್ಕೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಟ್ಟರ್ ಅವರು ಸಂತ ಫ್ರಾನ್ಸಿಸ್ ಜೇವಿಯರ್ ಅವರನ್ನು ‘ಉಗ್ರಗಾಮಿ’ ಎಂದು ಉಲ್ಲೇಖಿಸಿದ್ದಾಗಿ ವರದಿಯಾಗಿದ್ದು, ಈ ಹೇಳಿಕೆ ಕ್ರೈಸ್ತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸೇರಿದಂತೆ ಹಲವರು ಪೊಲೀಸ್ ದೂರು ದಾಖಲಿಸಿದ್ದು, ಪ್ರಕರಣವನ್ನು ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವೊ ಹಾಗೂ ಎಎಪಿ ಗೋವಾ ಅಧ್ಯಕ್ಷ ವಾಲ್ಮೀಕಿ ನಾಯಕ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಇಂತಹ ಹೇಳಿಕೆಗಳು ಧರ್ಮಗಳ ನಡುವಿನ ಸೌಹಾರ್ದತೆಗೆ ಹಾನಿ ಉಂಟುಮಾಡುತ್ತವೆ ಎಂದು ತಿಳಿಸಿದ್ದಾರೆ.
ಈ ನಡುವೆ ಕರ್ನಾಟಕ ಕ್ರೈಸ್ತ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸ್ಟ್ಯಾನಿ ಪಿಂಟೋ ಅವರು ಪ್ರತಿಕ್ರಿಯೆ ನೀಡಿದ್ದು, “ಇಂತಹ ಅವಹೇಳನಕಾರಿ ಹೇಳಿಕೆಗಳು ಸಮಾಜದ ಏಕತೆಗೆ ಧಕ್ಕೆ ತರುತ್ತವೆ. ಸಂಬಂಧಪಟ್ಟ ವ್ಯಕ್ತಿಯ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸಮಸ್ತ ಕ್ರೈಸ್ತ ಸಮುದಾಯದೊಂದಿಗೆ ಕ್ಷಮೆ ಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.
ಸಂತ ಫ್ರಾನ್ಸಿಸ್ ಜೇವಿಯರ್ ಅವರು ಗೋವಾದ ರಕ್ಷಕ ಸಂತನಾಗಿ ಗೌರವಿಸಲ್ಪಡುವ ಮಹಾನ್ ಧರ್ಮಪ್ರಚಾರಕರಾಗಿದ್ದು, ಅವರ ವಿರುದ್ಧದ ಹೇಳಿಕೆ ದೇಶದಾದ್ಯಂತ ಕ್ರೈಸ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
