‘ಅಕ್ಷರದೀಪವಾಗಿ ಬೆಳಗಿದ ಶಿಕ್ಷಕಿಗೆ ಸ್ಮರಣೀಯ ಬೀಳ್ಕೊಡುಗೆ’ – ನವೋಮಿ ಕೃಪಾಲತ ಅವರ ಸೇವೆಗೆ ಸಾರ್ವಜನಿಕರ ಗೌರವ ನಮನ


ಕೊಡ್ಲಿಪೇಟೆ: ಶಿಕ್ಷಕ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಅಲ್ಲ, ಸಮಾಜ ಸೇವೆಯಾಗಿ ಸ್ವೀಕರಿಸಿ ವಿದ್ಯಾರ್ಥಿಗಳ ಬದುಕಿನಲ್ಲಿ ಅಕ್ಷರದೀಪ ಬೆಳಗಿದ ದೊಡ್ಡಕೊಡ್ಲಿ ಸರ್ಕಾರಿ ಶಾಲೆಯ ಸಹ ಶಿಕ್ಷಕಿ ನವೋಮಿ ಕೃಪಾಲತ ಅವರ ನಿವೃತ್ತಿ ಅಂಗವಾಗಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭವು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಸಹೋದ್ಯೋಗಿಗಳು, ಹಳೆಯ ವಿದ್ಯಾರ್ಥಿಗಳು, ಗಣ್ಯರು ಹಾಗೂ ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ಸೇರಿ ಅವರ ಶಿಕ್ಷಣ ಸೇವೆಯನ್ನು ಕೊಂಡಾಡಿ ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮಕ್ಕೆ ಪಾಸ್ಟರ್ :ಫ್ರೆಡ್ಡಿ ಪ್ರಾರ್ಥನೆಯ ಮೂಲಕ ಚಾಲನೆ ನೀಡಿದರು. ಸಹಶಿಕ್ಷಕಿ ಚೈತ್ರಲೇಖ ಪ್ರಾಸ್ತಾವಿಕವಾಗಿ ಮಾತನಾಡಿ, ನವೋಮಿ ಕೃಪಾಲತ ಅವರ ಸೇವಾ ಪಯಣವನ್ನು ಸ್ಮರಿಸಿದರು. ಅವರು ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಅವರ ವ್ಯಕ್ತಿತ್ವ ನಿರ್ಮಾಣಕ್ಕೂ ಆದ್ಯತೆ ನೀಡಿದ್ದು, ಆರ್ಥಿಕವಾಗಿ ಹಿಂದುಳಿದ ಹಲವಾರು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ನೆರವಾಗುವ ಮೂಲಕ ಶಿಕ್ಷಕ ವೃತ್ತಿಯ ಮಹತ್ವವನ್ನು ಎತ್ತಿಹಿಡಿದಿದ್ದಾರೆ ಎಂದು ಹೇಳಿದರು.

ಅತಿಥಿಯಾಗಿ ಭಾಗವಹಿಸಿದ್ದ ನಾಗರಾಜ್ ಮಾತನಾಡಿ, “ಶಿಕ್ಷಣ ಇಲಾಖೆ ಎಲ್ಲ ಇಲಾಖೆಗಳಿಗೂ ತಾಯಿಯಾಗಿದೆ. ಶಿಕ್ಷಕರ ನಿಷ್ಠೆ, ಪ್ರಾಮಾಣಿಕತೆ ಮತ್ತು ಸಮರ್ಪಣೆಯಿಂದಲೇ ಉತ್ತಮ ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ,” ಎಂದು ಅಭಿಪ್ರಾಯಪಟ್ಟರು.


ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಹೆಚ್.ಎನ್. ಮಂಜುನಾಥ್ ಮಾತನಾಡಿ, “ಸುಮಾರು 14 ವರ್ಷಗಳ ಕಾಲ ಒಂದೇ ಕುಟುಂಬದ ಸದಸ್ಯರಂತೆ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದೇವೆ. ಪರಸ್ಪರ ಸಹಕಾರ, ವಿಶ್ವಾಸ ಮತ್ತು ಬಾಂಧವ್ಯದೊಂದಿಗೆ ಎಲ್ಲ ಸವಾಲುಗಳನ್ನು ಎದುರಿಸಿದ್ದೇವೆ. ನವೋಮಿ ಕೃಪಾಲತ ಅವರ ಸೇವಾ ಮನೋಭಾವ ಮತ್ತು ಸರಳ ವ್ಯಕ್ತಿತ್ವ ಸದಾ ನಮ್ಮೆಲ್ಲರಿಗೂ ಪ್ರೇರಣೆಯಾಗಿರಲಿದೆ,” ಎಂದು ಹೇಳಿದರು.

ಎಸ್.ಕೆ.ಎಸ್. ಶಾಲೆಯ ಕಾರ್ಯದರ್ಶಿ ದಿವಾಕರ್, ಶಿಕ್ಷಕ ರಾಜಪ್ಪ, ಕೊಡ್ಲಿಪೇಟೆ ಕ್ಲಸ್ಟರ್ ವಲಯದ ಶಿಕ್ಷಕರ ಪರವಾಗಿ ಡಿ.ಎಲ್. ಮೂರ್ತಿ, ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್, ಹಾಲಿ ಎಸ್‌ಡಿಎಂಸಿ ಅಧ್ಯಕ್ಷ ವಸಂತ್ ಸೇರಿದಂತೆ ಹಲವರು ಶುಭಾಶಯಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ವಲಯ ಸಂಪನ್ಮೂಲ ವ್ಯಕ್ತಿ ರವೀಶ್ ಕೊಡ್ಲಿಪೇಟೆ ಕ್ಲಸ್ಟರ್ ವಲಯದ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು, ಕೊಡ್ಲಿಪೇಟೆ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಕೆ. ಯತೀಶ್, ಶಿಕ್ಷಕರ ಸಂಘದ ನಿರ್ದೇಶಕ ಶಶಿಕುಮಾರ್, ಕೊಡಗು ಜಿಲ್ಲಾ ವೀರಶೈವ ಸಂಘದ ಉಪಾಧ್ಯಕ್ಷ ಪ್ರವೀಣ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ನಿವೃತ್ತ ಶಿಕ್ಷಕಿ ನವೋಮಿ ಕೃಪಾಲತ ತಮ್ಮ ಸೇವಾ ಪಯಣದ ನೆನಪುಗಳನ್ನು ಹಂಚಿಕೊಂಡು, ಶಾಲೆ, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ನೀಡಿದ ಪ್ರೀತಿ, ವಿಶ್ವಾಸ ಮತ್ತು ಸಹಕಾರಕ್ಕೆ ಭಾವುಕರಾಗಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಲೆಯಿಂದ ವರ್ಗಾವಣೆಯಾಗಿ ಬೇರೆಡೆ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಾದ ಹೆಚ್.ಎನ್. ಮಂಜುನಾಥ್ ಹಾಗೂ ರಾಜಪ್ಪ ಅವರನ್ನು ಶಾಲೆ ಮತ್ತು ಎಸ್‌ಡಿಎಂಸಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಬಳಿಕ ನಿವೃತ್ತ ಶಿಕ್ಷಕಿ ನವೋಮಿ ಕೃಪಾಲತ ಅವರಿಗೂ ಶಾಲು ಹೊದಿಸಿ, ಸ್ಮರಣಿಕೆ ನೀಡಿ, ಹೂಗುಚ್ಛ ಅರ್ಪಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಕಾರ್ಯಕ್ರಮವನ್ನು ಎಸ್ ಎಂ. ಸುರೇಶ್ ನಿರೂಪಿಸಿದರು.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW