ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶ ಪೊಲೀಸರ ಸಹಕಾರದೊಂದಿಗೆ ಗೋವಾ ಪೊಲೀಸರು ಬಲಪಂಥೀಯ ಭಾಷಣಕಾರ ಗೌತಮ್ ಖಟ್ಟರ್ ಅವರನ್ನು ಶುಕ್ರವಾರ ಕುಲ್ಲು ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಗೋವಾಕ್ಕೆ ಕರೆತರಲು ಅಪರಾಧ ವಿಭಾಗದ ವಿಶೇಷ ತಂಡ ಶೀಘ್ರದಲ್ಲೇ ವಶಕ್ಕೆ ಪಡೆಯಲಿದೆ ಎಂದು ತಿಳಿದುಬಂದಿದೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಗೋವಾ ಹಾಗೂ ಹಿಮಾಚಲ ಪ್ರದೇಶ ಪೊಲೀಸ್ ತಂಡಗಳಿಗೆ, ಜೊತೆಗೆ ಗೋವಾ ರಾಜ್ಯದಲ್ಲಿ ಸಂತ ಫ್ರಾನ್ಸಿಸ್ ಜೇವಿಯರ್ ಕುರಿತು ನ್ಯಾಯಕ್ಕಾಗಿ ಹೋರಾಟ ನಡೆಸಿದ ಕ್ರೈಸ್ತ ಸಮುದಾಯದ ನಾಯಕರಿಗೆ ಹಾಗೂ ಸದಸ್ಯರಿಗೆ ಕರ್ನಾಟಕ ಕ್ರೈಸ್ತ ಸಂಘಟನೆ ವತಿಯಿಂದ ಕೃತಜ್ಞತೆ ಸಲ್ಲಿಸಲಾಗುತ್ತದೆ ಎಂದು ರಾಜ್ಯಾಧ್ಯಕ್ಷ ಸ್ಟ್ಯಾನಿ ಪಿಂಟೋ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸಂತ ಫ್ರಾನ್ಸಿಸ್ ಜೇವಿಯರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಗೌತಮ್ ಖಟ್ಟರ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಆರೋಪಿಗೆ ಜಾಮೀನು ನೀಡಬಾರದು. ಮುಂದೆ ಕ್ರೈಸ್ತ ಸಮುದಾಯದ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡದಂತೆ ಒಂದು ಕೋಟಿ ರೂ. ಬಾಂಡ್ ಪಡೆಯಬೇಕು. ಅಲ್ಲದೇ, ಈ ಕಾರ್ಯಕ್ರಮವನ್ನು ಆಯೋಜಿಸಿದವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಟ್ಯಾನಿ ಪಿಂಟೋ ಅವರು ಗೋವಾ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
