ಮೂರು ದಿನಗಳ ನಿರಂತರ ಶೋಧಕ್ಕೆ ಯಶಸ್ಸು: ನೀರುಗುಂದದ ನಾಪತ್ತೆ ಪ್ರಕರಣಕ್ಕೆ ತೆರೆ NDRF, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರ ಮೃತದೇಹ ಪತ್ತೆ


ಕೊಡ್ಲಿಪೇಟೆ: ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿದ್ದ ನೀರುಗುಂದ ಗ್ರಾಮದ ನಿವಾಸಿಗಳಾದ ನಾಗರಾಜು ಹಾಗೂ ಶಿವರಾಜ್ ಅವರ ಮೃತದೇಹಗಳು ಪತ್ತೆಯಾಗಿವೆ.


         ನಾಪತ್ತೆಯಾದವರಿಗಾಗಿ ಮೂರು ದಿನಗಳ ಕಾಲ ನಡೆದ ತೀವ್ರ ಶೋಧ ಕಾರ್ಯಾಚರಣೆಯಲ್ಲಿ NDRF ತಂಡ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಎನ್‌ಡಿಆರ್‌ಎಫ್ ತಂಡದ ಇನ್ಸ್‌ಪೆಕ್ಟರ್ ಕಮಾಂಡರ್ ರಂಬಾಜಿ ಅವರ ನೇತೃತ್ವದಲ್ಲಿ ಎಲ್ಲಪ್ಪ, ಸೌಮ್ಯ ಕುಮಾರ್ ಹಾಗೂ ಇತರ ಸಿಬ್ಬಂದಿಗಳು ಆಧುನಿಕ ರಕ್ಷಣಾ ಸಲಕರಣೆಗಳೊಂದಿಗೆ ಆಳವಾದ ನೀರಿನ ಪ್ರದೇಶಗಳಲ್ಲಿ ಶೋಧ ನಡೆಸಿದರು.

            ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಹೆಚ್. ಮಹೇಂದ್ರ, ಈಶ್ವರ ಹಾಗೂ ಇತರ ಸಿಬ್ಬಂದಿಗಳು NDRF ತಂಡದೊಂದಿಗೆ ಸೇರಿ ನಿರಂತರ ಕಾರ್ಯಾಚರಣೆ ನಡೆಸಿದರು.

             ಘಟನಾ ಸ್ಥಳಕ್ಕೆ ಆಗಮಿಸಿದ ಸೋಮವಾರಪೇಟೆ ತಾಲೂಕಿನ ದಂಡಾಧಿಕಾರಿ ಕೃಷ್ಣಮೂರ್ತಿ ಹಾಗೂ ಕೊಡ್ಲಿಪೇಟೆ ಹೋಬಳಿ ಕಂದಾಯ ಇಲಾಖೆಯ ಪರಿವೀಕ್ಷಕ ಪರಿಶೀಲನೆ ನಡೆಸಿದರು.

            ಶನಿವಾರಸಂತೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಚಂದ್ರ ಹೆಚ್.ವೈ., ಹರ್ಷ, ರಂಜಿತ್, ಮಹೇಶ್ ಹೆಚ್.ಎ., ಅಬ್ದುಲ್ ರಹೀಮ್ ಹಾಗೂ ಸಿಬ್ಬಂದಿಗಳು, ಕೊಡ್ಲಿಪೇಟೆ ಪೊಲೀಸ್ ಸಿಬ್ಬಂದಿಗಳಾದ ಎಎಸ್‌ಐ ಲಕ್ಷ್ಮೀ ಪ್ರಸಾದ್ ರೈ, ಮೂರ್ತಿ, ಗೃಹ ರಕ್ಷಕ ದಳದ ಲೋಕೇಶ್ ಸೇರಿದಂತೆ ಇತರ ಸಿಬ್ಬಂದಿಗಳು ಮೂರು ದಿನಗಳ ಕಾಲ ಸ್ಥಳದಲ್ಲೇ ಇದ್ದು ಕಾರ್ಯಾಚರಣೆಗೆ ಸಹಕರಿಸಿದರು.

         ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಧನಿಕ ಅವರು ಸ್ಥಳದಲ್ಲೇ ಮೃತದೇಹಗಳ ಮರಣೋತ್ತರ ಪರೀಕ್ಷೆ (ಪೋಸ್ಟ್ಮಾರ್ಟಂ) ನಡೆಸಿದರು. ನಂತರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಳ್ಳಲಾಯಿತು.

          ಸ್ಥಳಕ್ಕೆ ಭೇಟಿ ನೀಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಮೃತರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಅಕಾಲಿಕವಾಗಿ ಅಗಲಿದ ಇಬ್ಬರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಶಾಸಕರು, ಕುಟುಂಬದವರ ದುಃಖದಲ್ಲಿ ಭಾಗಿಯಾಗಿ ಧೈರ್ಯ ತುಂಬಿದರು. ಈ ಸಂಕಷ್ಟದ ಸಂದರ್ಭದಲ್ಲಿ ಕುಟುಂಬದೊಂದಿಗೆ ಇರುವುದಾಗಿ ಭರವಸೆ ನೀಡಿದರು.

            ಇಬ್ಬರ ದುರಂತ ಸಾವಿನಿಂದ ನೀರುಗುಂದ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW