ಸೆಕೆಂಡ್‌ನಲ್ಲಿ ಮರಣ ಎದುರು… ಪ್ರಾರ್ಥನೆಯಲ್ಲಿ ಜೀವ ಉಳಿದ ಅದ್ಭುತ!


ಮರಣದ ಅಂಚಿನಿಂದ ಮರಳಿ ಬಂದ ಜೀವನ
. ಇದು ನನ್ನ ಜೀವಂತ ಅನುಭವ ಸಾಕ್ಷಿ

ಜೀವನದಲ್ಲಿ ಕೆಲವೇ ಕ್ಷಣಗಳು ನಮ್ಮ ಬದುಕನ್ನು ಸಂಪೂರ್ಣವಾಗಿ ಬದಲಾಯಿಸುತ್ತವೆ. 2026ರ ಏಪ್ರಿಲ್ 15 — ನನ್ನ ಜೀವನದಲ್ಲಿ ಅಂಥದೇ ಒಂದು ದಿನ. ಆ ದಿನ ನಾನು ಮರಣವನ್ನು ಮುಖಾಮುಖಿಯಾಗಿ ಕಂಡೆನು… ಆದರೆ ಅದೇ ಕ್ಷಣದಲ್ಲಿ ದೇವರ ಅಪಾರ ಕೃಪೆಯ ಮಹಿಮೆಯನ್ನು ಅನುಭವಿಸಿದೆ.

ಆ ದಿನ ಮಧ್ಯಾಹ್ನ ಸುಮಾರು 3:30 ಗಂಟೆಗೆ, ನನ್ನ ಮಾರುತಿ ಡಿಸೈರ್ ಕಾರಿನಲ್ಲಿ  ನನ್ನ ಗ್ರಾಮದಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ. ಮಂಡ್ಯ ಜಿಲ್ಲೆಯ ಬೆಳ್ಳೂರು ಹೋಬಳಿ, ಸಣಬ ಗ್ರಾಮದ ಗೇಟ್ ಸಮೀಪ, ಮಂಗಳೂರು–ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಚನ್ನರಾಯಪಟ್ಟಣದಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದೆ 

ಆದರೆ, ಕೆಲವೇ ಕ್ಷಣಗಳಲ್ಲಿ ಆ ಶಾಂತ ಪ್ರಯಾಣ ಭೀಕರ ದುರಂತವಾಗಿ ಮಾರ್ಪಟ್ಟಿತು.

ಎದುರು ದಿಕ್ಕಿನಿಂದ, ಅತೀವೇಗದಲ್ಲಿ ಮತ್ತು ಅಜಾಗರೂಕತೆಯಿಂದ ರಾಂಗ್ ಸೈಡ್‌ನಲ್ಲಿ ಬರುತ್ತಿದ್ದ ಕಾರೊಂದು, ನೇರವಾಗಿ ನನ್ನ ವಾಹನಕ್ಕೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿತು. ಆ ಭೀಕರ ಹೊಡೆತಕ್ಕೆ ನನ್ನ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿತು.

ಅಪಘಾತದಲ್ಲಿ ನನ್ನ  ಎಡಕಾಲು, ಪಾದದ ಬಳಿ, ಎದೆ ಹಾಗೂ ಕತ್ತಿನ ಭಾಗಗಳಲ್ಲಿ ಸಣ್ಣದಾದ ಗಾಯಗಳು ಉಂಟಾಯಿತು. ನನ್ನ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿತು ಅಂದರೆ ಉಪಯೋಗ ಶೂನ್ಯ ಆಗುವ ರೀತಿ ದೃಶ್ಯವೇ ಭಯಾನಕವಾಗಿತ್ತು.

ಆ ಕ್ಷಣದಲ್ಲಿ, ಮರಣ ನನ್ನ ಮುಂದೆ ನಿಂತಿರುವಂತೆ ನನಗೆ ಸ್ಪಷ್ಟವಾಗಿ ಅನುಭವವಾಯಿತು. ಎದುರುಗಡೆಯಿಂದ ಬರುತ್ತಿದ್ದ ಕಾರನ್ನು ಕಂಡ ಕ್ಷಣದಲ್ಲಿ, ನನ್ನ ಜೀವವನ್ನು ದೇವರ ಕೈಗಳಲ್ಲಿ ಒಪ್ಪಿಸಿ, ಹೃದಯದ ಆಳದಿಂದ ಪ್ರಾರ್ಥನೆ ಮಾಡಿದೆನು. ಅದು ನನ್ನ  ಜೀವನದ ಅತ್ಯಂತ ನಿಜವಾದ, ಆತ್ಮದ ಆಳದಿಂದ ಬಂದ ಪ್ರಾರ್ಥನೆ ಆಗಿತ್ತು 

ಆದರೆ, ಅದೇ ಕ್ಷಣದಲ್ಲಿ ಸಂಭವಿಸಿದದ್ದು ಅಚ್ಚರಿಯೇ ಸರಿ.

ಅಪಘಾತದ ತೀವ್ರತೆಯನ್ನು ಗಮನಿಸಿದ ಸ್ಥಳೀಯರು ವೈದ್ಯರು ಹಾಗೂ ಪೋಲಿಸರು, ನಾನು ಬದುಕಿ ಉಳಿದಿರುವುದನ್ನು ನಂಬಲಿಲ್ಲ. ಇಂತಹ ಅಪಘಾತದಲ್ಲಿ ಜೀವ ಉಳಿಯುವುದು ಬಹುತೇಕ ಅಸಾಧ್ಯವೆನ್ನಿಸುವಷ್ಟರ ಮಟ್ಟಿಗೆ ಪರಿಸ್ಥಿತಿ ಗಂಭೀರವಾಗಿತ್ತು. ಆದರೂ ನಾನು ಜೀವಂತವಾಗಿ ಹೊರ ಬಂದೆನು.

“ನನ್ನ ರಕ್ಷಕನಾದ ಯೇಸು ಕ್ರಿಸ್ತನೇ ನನ್ನನ್ನು ಮರಣದ ಅಂಚಿನಿಂದ ಕಾಪಾಡಿದನು,” ಎಂದು ನಾನು ಭರವಸೆಯಿಂದ ಹೇಳುತ್ತೇನೆ. “ದೇವರ ವಾಕ್ಯದಲ್ಲಿ ಹೇಳಿರುವಂತೆ, ‘ನಿನ್ನ ಕಾಲು ಕಲ್ಲಿಗೆ ತಾಗದಂತೆ ಆತನು ಕಾಪಾಡುವನು’ — ಆ ವಾಗ್ದಾನ ನನ್ನ ಜೀವನದಲ್ಲಿ ನಿಜವಾಯಿತು.”

ಈ ಘಟನೆಯು ನನ್ನ ಜೀವನದ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಪ್ರತಿಯೊಂದು ಉಸಿರು ದೇವರ ವರ ಎಂಬ ಅರಿವು ಇನ್ನಷ್ಟು ಗಾಢವಾಗಿದೆ. “ಇಂದು ನಾನು ಜೀವಂತವಾಗಿದ್ದೇನೆ ಎಂದರೆ, ಅದು ಕೇವಲ ಅದೃಷ್ಟವಲ್ಲ — ಅದು ದೇವರ ಕೃಪೆ ಮತ್ತು ರಕ್ಷಣೆಯ ಫಲ,” ಎಂದು ಸಾಕ್ಷಿ ಹೇಳಲು ಬಯಸುತ್ತೇನೆ 

ಮರಣವನ್ನು ಮುಖಾಮುಖಿಯಾಗಿ ಕಂಡ ಕ್ಷಣ… ಆದರೆ ದೇವರು ಮತ್ತೆ ಬದುಕಲು ಅವಕಾಶ ನೀಡಿದ ಅದ್ಭುತ ಅನುಭವ — ಇದೇ ನನ್ನ ಜೀವಂತ ಸಾಕ್ಷಿ.

ಅರುಣ್ ಕುಮಾರ್ , ಶಿವರಳ್ಳಿ ಗ್ರಾಮ, ಕೊಡ್ಲಿಪೇಟೆ

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW