ಪುರಸಭೆ ಕಚೇರಿ ಆವರಣದಲ್ಲೇ ಅಪಾಯಕಾರಿ ಗುಂಡಿ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕರವೇ ಸ್ವಾಭಿಮಾನಿ ಬಣ ಆಕ್ರೋಶ

ಕುಶಾಲನಗರ: ಸುಮಾರು ₹7.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು 2025ರ ಜೂನ್ 11ರಂದು ಅದ್ದೂರಿಯಾಗಿ ಉದ್ಘಾಟನೆಗೊಂಡ ಕುಶಾಲನಗರ ಪುರಸಭೆ ಕಚೇರಿ ಹಾಗೂ ವಾಣಿಜ್ಯ ಸಂಕೀರ್ಣದ ಆವರಣದಲ್ಲೇ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುವಂತಹ ಸಮಸ್ಯೆ ಉಂಟಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಆರೋಪಿಸಿದೆ.


ಪುರಸಭೆ ಕಚೇರಿಯ ಮುಖ್ಯ ದ್ವಾರ ಹಾಗೂ ಅಧಿಕಾರಿಗಳ ವಾಹನ ನಿಲುಗಡೆ ಸ್ಥಳದ ಸಮೀಪದಲ್ಲಿರುವ ಮಳೆನೀರು ಹರಿಯುವ ಚರಂಡಿಯ ಕಬ್ಬಿಣದ ಸರಳುಗಳು ಮುರಿದು ಬಿದ್ದಿದ್ದು, ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ಪುರಸಭೆಗೆ ಆಗಮಿಸುವ ಸಾರ್ವಜನಿಕರು, ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಈ ಗುಂಡಿಯಿಂದ ಅಪಾಯ ಎದುರಿಸುವಂತಾಗಿದೆ ಎಂದು ಸಂಘಟನೆ ತಿಳಿಸಿದೆ.


ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡದ ಆವರಣದಲ್ಲಿ ಕೇವಲ ಅಲ್ಪ ಅವಧಿಯಲ್ಲೇ ಚರಂಡಿಯ ಗ್ರೀಲ್ಸ್‌ಗಳು ಹಾಳಾಗಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆ ಮೂಡಿಸಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಿರುವ ಕಟ್ಟಡದಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಂಡಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ ಎಂದು ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪುರಸಭೆ ಅಧಿಕಾರಿಗಳು ಪ್ರತಿದಿನ ತಮ್ಮ ವಾಹನಗಳನ್ನು ನಿಲ್ಲಿಸುವ ಸ್ಥಳದ ಪಕ್ಕದಲ್ಲೇ ಅಪಾಯಕಾರಿ ಗುಂಡಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಜವಾಬ್ದಾರಿತನವಾಗಿದೆ ಎಂದು ಸಂಘಟನೆ ಆರೋಪಿಸಿದೆ.


ಈ ಸ್ಥಳದಲ್ಲಿ ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಪುರಸಭೆ ಆಡಳಿತ ಎಚ್ಚೆತ್ತುಕೊಂಡು ತಕ್ಷಣ ದುರಸ್ತಿ ಕಾರ್ಯ ಕೈಗೊಂಡು, ಗಟ್ಟಿಮುಟ್ಟಾದ ಕಬ್ಬಿಣದ ಸರಳುಗಳನ್ನು ಅಳವಡಿಸಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಸ್ವಾಭಿಮಾನಿ ಬಣ ಎಚ್ಚರಿಕೆ ನೀಡಿದೆ.


ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ, ಗೌರವಾಧ್ಯಕ್ಷ ಚಂದ್ರು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ಕುಶಾಲನಗರ ತಾಲೂಕು ಸಂಚಾಲಕ ವಿಪಿ ಚಂದ್ರಣ್ಣ, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷೆ ಭವ್ಯ, ಜಿಲ್ಲಾ ಸಂಚಾಲಕ ಸತೀಶ್ ಹಾಗೂ ಪದಾಧಿಕಾರಿಗಳಾದ ವಿಲ್ಸನ್, ನಂಜಪ್ಪ ಮತ್ತು ರಮೇಶ್ ಉಪಸ್ಥಿತರಿದ್ದರು.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW