ಕುಶಾಲನಗರ, ಜೂ. 26: ಇಂಡಿಯನ್ ಪೆಂಟೆಕೋಸ್ಟಲ್ ಚರ್ಚ್ ಆಫ್ ಗಾಡ್ (ಐಪಿಸಿ) ಕರಿಸ್ಮಾ ಸೆಂಟರ್ ವತಿಯಿಂದ ಕುಶಾಲನಗರದ ತಪೋವನದಲ್ಲಿ ನಡೆದ ಆಧ್ಯಾತ್ಮಿಕ ಮಹಾಸಮ್ಮೇಳನವು ಭಕ್ತಿಪೂರ್ವಕ ಹಾಗೂ ಆತ್ಮೀಕ ಉತ್ಸಾಹದ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಐಪಿಸಿ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಪಾಸ್ಟರ್. ಕೆ.ವಿ. ಜೋಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭಕ್ಕೆ ಪಾಸ್ಟರ್. ಆಂಡ್ರ್ಯೂ ಥಾಮಸ್ ಅವರು ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಐಪಿಸಿ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ವರ್ಗೀಸ್ ಫಿಲಿಪ್, ರಾಜ್ಯ ಕಾರ್ಯದರ್ಶಿ ಪಾಸ್ಟರ್. ವರ್ಗೀಸ್ ಮ್ಯಾಥ್ಯೂ, ಪಾಸ್ಟರ್. ಡಾ. ಎನ್.ಕೆ. ಜಾರ್ಜ್, ಪಾಸ್ಟರ್. ಜಾರ್ಜ್ ಅಬ್ರಹಾಂ ಸೇರಿದಂತೆ ರಾಜ್ಯದ ಪ್ರಮುಖ ದೇವರ ಸೇವಕರು ದೇವರ ವಾಕ್ಯವನ್ನು ಆಧರಿಸಿ ಆತ್ಮೀಯ ಹಾಗೂ ಪ್ರೇರಣಾದಾಯಕ ಸಂದೇಶಗಳನ್ನು ನೀಡಿದರು. ಸಂದೇಶಗಳನ್ನು ಪಾಸ್ಟರ್. ಅಬ್ರಹಾಂ ಕೊಶಿ ಮತ್ತು ಪಾಸ್ಟರ್. ಎಲಿಷಾ ಅವರು ಕನ್ನಡಕ್ಕೆ ಭಾಷಾಂತರಿಸಿದರು.
ಸಮಾರಂಭದ ಪ್ರಮುಖ ಆಕರ್ಷಣೆಯಾಗಿ 11 ಮಂದಿ ದೇವರ ಸೇವಕರಿಗೆ ಹಸ್ತಾರ್ಪಣೆ (Commissioning) ಶುಶ್ರೂಷೆ ನೆರವೇರಿಸಲಾಯಿತು. ಹಸ್ತಾರ್ಪಣೆ ಹೊಂದಿದ ಸೇವಕರನ್ನು ಸಿಸ್ಟರ್. ತಂಗಮ್ಮ ಜಾರ್ಜ್, ಸಹೋದರ. ಸಜಿ ಟಿ. ಪಾರೆಲ್, ಸಹೋದರ. ಜಾಯ್ ಪಾಪಚನ್ ಹಾಗೂ ಸುವಾರ್ತಿಕ. ಆಲ್ವಿನ್ ಅವರು ಅಭಿನಂದಿಸಿ, ಅವರ ಮುಂದಿನ ಸೇವೆಗೆ ಶುಭ ಹಾರೈಸಿದರು.
ಪಾಸ್ಟರ್. ಜೋಶುವ ಅವರು ಆರಾಧನೆಗೆ ನೇತೃತ್ವ ವಹಿಸಿದರು. ಪಾಸ್ಟರ್. ಕ್ರಿಸ್ತಾನಂದ, ಪಾಸ್ಟರ್. ಶಿವಕುಮಾರ್ ಹಾಗೂ ಪಾಸ್ಟರ್. ಕುಮಾರ್ ಅವರು ದೇವರ ವಾಕ್ಯವನ್ನು ವಾಚಿಸಿದರು. ಪಾಸ್ಟರ್. ಫ್ರೆಡ್ಡಿ ಪಿ.ಸಿ. ಅವರು ಸ್ವಾಗತಿಸಿ, ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು.
ಪಾಸ್ಟರ್ ಕೆ.ಎ. ಜಾನ್ ಅವರು ಮುಕ್ತಾಯ ಪ್ರಾರ್ಥನೆ ನೆರವೇರಿಸಿದ ಬಳಿಕ, ಅಧ್ಯಕ್ಷತೆ ವಹಿಸಿದ್ದ ಪಾಸ್ಟರ್ ಕೆ.ವಿ. ಜೋಸ್ ಅವರು ಅಂತಿಮ ಆಶೀರ್ವಾದದೊಂದಿಗೆ ಮಹಾಸಮ್ಮೇಳನವನ್ನು ಮುಕ್ತಾಯಗೊಳಿಸಿದರು.
ಕೊಡಗು, ಬೆಂಗಳೂರು, ಚಿತ್ರದುರ್ಗ, ಹಾಸನ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪಾಸ್ಟರ್‌ಗಳು, ಸುವಾರ್ತಕರು ಹಾಗೂ ನೂರಾರು ವಿಶ್ವಾಸಿಗಳು ಸಮಾವೇಶದಲ್ಲಿ ಭಾಗವಹಿಸಿ ವಿಶೇಷ ಪ್ರಾರ್ಥನೆ, ಆರಾಧನೆ ಮತ್ತು ಆಶೀರ್ವಾದ ಸೇವೆಗಳಲ್ಲಿ ಪಾಲ್ಗೊಂಡು ಆಧ್ಯಾತ್ಮಿಕ ಆಶೀರ್ವಾದ ಹೊಂದಿದರು. ಮಹಾಸಮ್ಮೇಳನವು ವಿಶ್ವಾಸಿಗಳಲ್ಲಿ ಆಧ್ಯಾತ್ಮಿಕ ಪುನರುಜ್ಜೀವನ, ದೇವರ ಸೇವೆಯಲ್ಲಿನ ಸಮರ್ಪಣೆ ಹಾಗೂ ಕ್ರೈಸ್ತ ಸಮುದಾಯದ ಏಕತೆಯನ್ನು ಬಲಪಡಿಸುವ ಸಂದೇಶವನ್ನು ಸಾರಿತು.


