ನಾರಾಯಣಪುರ, ಛತ್ತೀಸ್‌ಗಢ: ಕ್ರೈಸ್ತ ನಂಬಿಕೆಯನ್ನು ಅನುಸರಿಸುತ್ತಿದ್ದ ಕಾರಣ ಆದಿವಾಸಿ ಕುಟುಂಬವೊಂದನ್ನು ಗ್ರಾಮದಿಂದ ಬಹಿಷ್ಕರಿಸಿದ ಘಟನೆ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಖಡ್‌ಗಾವೋನ್ ಗ್ರಾಮದಲ್ಲಿ ವರದಿಯಾಗಿದೆ.
ಕುಟುಂಬದ ಮುಖ್ಯಸ್ಥ ಮಂತು ದುಗ್ಗ ಕ್ರೈಸ್ತ ನಂಬಿಕೆಯನ್ನು ಅನುಸರಿಸುತ್ತಿದ್ದು, ಅವರ ಪುತ್ರ ಮೋಹನ್ ದುಗ್ಗ ಕಬೀರ್ ಪಂಥದ ಅನುಯಾಯಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇವರು ಸಾಂಪ್ರದಾಯಿಕ ಬುಡಕಟ್ಟು ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುತ್ತಿಲ್ಲ ಎಂಬ ಕಾರಣ ನೀಡಿ ಕುಟುಂಬವನ್ನು ಗ್ರಾಮದಿಂದ ಹೊರಹಾಕಲಾಗಿದ್ದು, ಅವರ ಮನೆಯ ಸಾಮಾನುಗಳನ್ನೂ ಹೊರಕ್ಕೆ ಸ್ಥಳಾಂತರಿಸಲಾಗಿತ್ತು.
ಘಟನೆಯ ಮಾಹಿತಿ ತಿಳಿದ ಬಳಿಕ ಪೊಲೀಸರು ಹಾಗೂ ಜಿಲ್ಲಾ ಆಡಳಿತ ಗ್ರಾಮಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ನಂತರ ಕುಟುಂಬವು ಸಾಂಪ್ರದಾಯಿಕ ಬುಡಕಟ್ಟು ನಂಬಿಕೆಗಳನ್ನು ಪಾಲಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಮರಳಲು ಅವಕಾಶ ಕಲ್ಪಿಸಲಾಯಿತು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಶೀಲ್ ನಾಯಕ್ ತಿಳಿಸಿದ್ದಾರೆ.
ಈ ಘಟನೆ ಧಾರ್ಮಿಕ ಸ್ವಾತಂತ್ರ್ಯ, ಮನಸ್ಸಾಕ್ಷಿಯ ಸ್ವಾತಂತ್ರ್ಯ ಹಾಗೂ ಪ್ರತಿಯೊಬ್ಬ ನಾಗರಿಕನಿಗೆ ಸಂವಿಧಾನ ನೀಡಿರುವ ನಂಬಿಕೆಯ ಹಕ್ಕಿನ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
