ಹೇರೂರು ಗ್ರಾಮದಲ್ಲಿ ಪ್ರಾರ್ಥನಾ ಮಂದಿರ ಉದ್ಘಾಟನೆ ವೇಳೆ ಉದ್ವಿಗ್ನತೆ: ಭಕ್ತರ ವಿಚಾರಣೆ ಬಳಿಕ ಬಿಡುಗಡೆ


ಕೊಡಗು: ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಗ್ರಾಮದಲ್ಲಿ ಪ್ರಾರ್ಥನಾ ಮಂದಿರ ಉದ್ಘಾಟನೆ ಕಾರ್ಯಕ್ರಮದ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಘಟನೆ ನಡೆದಿದೆ.
                ತಮಿಳುನಾಡಿನಿಂದ ಆಗಮಿಸಿದ್ದ ಭಕ್ತರು ಹಾಗೂ ಸ್ಥಳೀಯ ಕ್ರೈಸ್ತರು ಪ್ರಾರ್ಥನೆಯಲ್ಲಿ ತೊಡಗಿದ್ದ ಸಂದರ್ಭ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಪರಿಣಾಮ ವಾಗ್ವಾದ ಉಂಟಾಯಿತು ಎನ್ನಲಾಗಿದೆ. ಸ್ಥಳೀಯರು ಮತ್ತು ಹಾಡಿ ನಿವಾಸಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
               ಘಟನೆಯ ಮಾಹಿತಿ ತಿಳಿದ ಕೂಡಲೇ ಕುಶಾಲನಗರ ವೃತ್ತ ನಿರೀಕ್ಷಕ ಪ್ರದೀಪ್ ನೇತೃತ್ವದಲ್ಲಿ ಸುಂಟಿಕೊಪ್ಪ ಮತ್ತು ಕುಶಾಲನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಸಭಾ ಪಾಲಕರಾದ ರಂಗ ಸೇರಿದಂತೆ ತಮಿಳುನಾಡಿನಿಂದ ಆಗಮಿಸಿದ್ದ ಭಕ್ತರನ್ನು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಯಿತು.
                ಕಾರ್ಯಕ್ರಮ, ಕಟ್ಟಡ ನಿರ್ಮಾಣ ಹಾಗೂ ಸ್ಥಳೀಯರ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ಬಳಿಕ ಮುಚ್ಚಳಿಕೆ ಬರೆಸಿಕೊಂಡು ಅವರನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.
               ಸ್ಥಳೀಯ ಕ್ರೈಸ್ತ ಸಮುದಾಯದವರು, “ನಾವು ಶಾಂತಿಯುತವಾಗಿ ಪ್ರಾರ್ಥನೆ ನಡೆಸುತ್ತಿದ್ದೇವೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
             ಇನ್ನೊಂದೆಡೆ, ಸ್ಥಳೀಯ ಕೆಲವು ಸಂಘಟನೆಗಳು ಪ್ರಾರ್ಥನಾ ಮಂದಿರ ನಿರ್ಮಾಣ ಹಾಗೂ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಗತ್ಯ ಅನುಮತಿಗಳು ಪಡೆಯಲಾಗಿಲ್ಲ ಎಂದು ಆರೋಪಿಸಿವೆ. ಈ ಕುರಿತು ಪೊಲೀಸರು ಹಾಗೂ ಗ್ರಾಮ ಪಂಚಾಯಿತಿ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಪರಿಸ್ಥಿತಿ ಸದ್ಯ ಶಾಂತವಾಗಿದೆ ಎಂದು ತಿಳಿದುಬಂದಿದೆ.
               ಇದೇ ವೇಳೆ ಕರ್ನಾಟಕ ಕ್ರೈಸ್ತ ಸಂಘಟನೆಯ ರಾಜ್ಯಾಧ್ಯಕ್ಷ ಸ್ಟ್ಯಾನಿ ಪಿಂಟೋ ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಪ್ರಕರಣ ದಾಖಲಿಸದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW