ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಆದಿವಾಸಿ ಪ್ರದೇಶಗಳಲ್ಲಿ ಕ್ರೈಸ್ತ ಸಮುದಾಯದ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯಗಳ ಕುರಿತು ಮಾನವ ಹಕ್ಕುಗಳ ಸಂಘಟನೆಯಾದ ಪೀಪಲ್ಸ್ ಟ್ರಿಬ್ಯೂನಲ್ ತೀವ್ರ ಆತಂಕ ವ್ಯಕ್ತಪಡಿಸಿದೆ. ದೆಹಲಿಯ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರತಿನಿಧಿಗಳು ದೇಶದ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿದರು.
ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಯೋಜಿತ ದಾಳಿಗಳು ಸಂವಿಧಾನವು ನೀಡಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ಸಂಘಟನೆಯ ಮುಖಂಡರು ಆರೋಪಿಸಿದರು. ಮತಾಂತರದ ಆರೋಪದ ಹೆಸರಿನಲ್ಲಿ ಗರ್ಭಿಣಿಯರು ಹಾಗೂ ಕ್ರೈಸ್ತ ಸನ್ಯಾಸಿನಿಯರ ಮೇಲೆಯೂ ಹಲ್ಲೆಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್ ತಿಳಿಸಿದ್ದಾರೆ.
ಆದಿವಾಸಿ ಪ್ರದೇಶಗಳಲ್ಲಿ ಕ್ರೈಸ್ತರು ಎದುರಿಸುತ್ತಿರುವ ಹಿಂಸೆ, ತಾರತಮ್ಯ ಮತ್ತು ಹಕ್ಕುಗಳ ಉಲ್ಲಂಘನೆ ಕುರಿತ ಸಾಕ್ಷ್ಯಚಿತ್ರವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಹಿರಿಯ ಪತ್ರಕರ್ತ ಜಾನ್ ದಯಾಳ್ ಹಾಗೂ ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಿತು.
ಕ್ರೈಸ್ತರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದೌರ್ಜನ್ಯಗಳನ್ನು ತಡೆಯಲು ಹಾಗೂ ಸಂವಿಧಾನಾತ್ಮಕ ಹಕ್ಕುಗಳನ್ನು ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪೀಪಲ್ಸ್ ಟ್ರಿಬ್ಯೂನಲ್ ಆಗ್ರಹಿಸಿದೆ.
