ಉತ್ತರ ಪ್ರದೇಶದಲ್ಲಿ ಮತಾಂತರ ಆರೋಪ; ಮೂವರು ಕ್ರೈಸ್ತ ಯುವಕರ ಬಂಧನ

                                                                  * ಸಾಂದರ್ಭಿಕ ಚಿತ್ರ

ಉತ್ತರ ಪ್ರದೇಶ: ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿನ ಮತಾಂತರ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂಬ ಆರೋಪದ ಮೇರೆಗೆ ಪಾಸ್ಟರ್ ವಿವೇಕ್ ಕುಮಾರ್, ಮೋಹಿತ್ ಚೌಧರಿ ಹಾಗೂ ಅಮಿತ್ ಎಂಬ ಮೂವರು ಕ್ರೈಸ್ತ ಯುವಕರನ್ನು ಮೇ 27ರಂದು ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಮತಾಂತರ ವಿರೋಧಿ ಕಾನೂನು ಉಲ್ಲಂಘನೆ ಆರೋಪದಡಿ ಇವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬಂಧಿತರ ಬಳಿಯಿಂದ ಬೈಬಲ್ ಹಾಗೂ ಇತರ ಕ್ರೈಸ್ತ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಆರೋಪಗಳನ್ನು ಸ್ಥಳೀಯ ಕ್ರೈಸ್ತ ನಾಯಕರು ತೀವ್ರವಾಗಿ ತಳ್ಳಿಹಾಕಿದ್ದಾರೆ.

ಚರ್ಚ್ ಮೂಲಗಳ ಪ್ರಕಾರ, ಲಖ್ನೌನಲ್ಲಿ ನಡೆಯುತ್ತಿದ್ದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಲು ಸುಮಾರು 30 ಮಂದಿ ಕ್ರೈಸ್ತ ವಿಶ್ವಾಸಿಗಳು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕೆಲ ಹಿಂದೂತ್ವ ಸಂಘಟನೆಗಳ ಕಾರ್ಯಕರ್ತರು ಬಸ್ಸನ್ನು ತಡೆದು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಯಾಣಿಕರ ಬಳಿ ಬೈಬಲ್ ಮತ್ತು ಪ್ರಾರ್ಥನಾ ಪುಸ್ತಕಗಳು ಕಂಡುಬಂದ ಹಿನ್ನೆಲೆಯಲ್ಲಿ, ಅವರು ಸಾಮೂಹಿಕ ಮತಾಂತರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಸಂಘಟನೆಗಳು ಪೊಲೀಸರಿಗೆ ಮಾಹಿತಿ ನೀಡಿದ್ದವು. ಬಳಿಕ ಪೊಲೀಸರು ಎಲ್ಲ ಪ್ರಯಾಣಿಕರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.

ವಿಚಾರಣೆಯ ನಂತರ ಉಳಿದವರನ್ನು ಬಿಡುಗಡೆ ಮಾಡಲಾಗಿದ್ದು, ಪ್ರಯಾಣದ ಸಂಘಟಕರಾಗಿದ್ದ ವಿವೇಕ್ ಕುಮಾರ್, ಮೋಹಿತ್ ಚೌಧರಿ ಮತ್ತು ಅಮಿತ್ ಅವರನ್ನು ಮಾತ್ರ ಬಂಧನದಲ್ಲಿರಿಸಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW