ನವದೆಹಲಿ, ಮೇ 3: ಧರ್ಮ ಪ್ರಚಾರ ಮಾಡುವುದು ಕಾನೂನುಬಾಹಿರವಲ್ಲ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ. ವ್ಯಕ್ತಿಗೆ ತನ್ನ ಇಷ್ಟದ ಧರ್ಮವನ್ನು ನಂಬುವ ಹಾಗೂ ಅದನ್ನು ಇತರರಿಗೆ ತಿಳಿಸುವ ಹಕ್ಕು ಭಾರತದ ಸಂವಿಧಾನ ನೀಡಿದ ಮೂಲಭೂತ ಹಕ್ಕು ಎಂದು ತಮಿಳುನಾಡು ಸರ್ಕಾರ ತನ್ನ ವಾದದಲ್ಲಿ ತಿಳಿಸಿದೆ.
ಸರ್ಕಾರ ಸಲ್ಲಿಸಿದ ಪತ್ರದಲ್ಲಿ ಭಯ ಹುಟ್ಟಿಸಿ ಅಥವಾ ವಂಚನೆ ಮೂಲಕ ಮತಾಂತರಗೊಳಿಸುವುದು ಮಾತ್ರ ಕಾನೂನುಬಾಹಿರವಾಗಿದ್ದು, ಅಂಥ ಸಂದರ್ಭಗಳಲ್ಲಿ ಮಾತ್ರ ಸರ್ಕಾರ ಹಸ್ತಕ್ಷೇಪ ಮಾಡುತ್ತದೆ ಎಂದು ಹೇಳಲಾಗಿದೆ. ಬಡವರಿಗೆ ಸಹಾಯ ಮಾಡುವುದು ಅಥವಾ ನಂಬಿಕೆಗಳನ್ನು ಹಂಚಿಕೊಳ್ಳುವುದು ಯಾವುದೇ ಅಪರಾಧವಲ್ಲ ಎಂದು ಕೂಡ ಸ್ಪಷ್ಟಪಡಿಸಲಾಗಿದೆ.
ವ್ಯಕ್ತಿಯ ಮನಸ್ಸಿನ ಸ್ವಾತಂತ್ರ್ಯ ಮತ್ತು ಧಾರ್ಮಿಕ ನಂಬಿಕೆಗಳಿಗೆ ಅಡ್ಡಿಪಡಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಅದು ಗೌರವಯುತ ಜೀವನ ನಡೆಸುವ ಹಕ್ಕಿನ ಒಂದು ಭಾಗವಾಗಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ದೇಶದಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ ಎಂಬ ಆರೋಪಗಳಿಗೆ ತಮಿಳುನಾಡು ಸರ್ಕಾರ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದು, ಇಂತಹ ಘಟನೆಗಳು ವ್ಯಾಪಕವಾಗಿ ನಡೆಯುತ್ತಿವೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯಗಳಿಲ್ಲ ಎಂದು ತಿಳಿಸಿದೆ. ಧರ್ಮಸ್ವಾತಂತ್ರ್ಯವನ್ನು ಕಾನೂನಿನ ಹೆಸರಿನಲ್ಲಿ ಕಡಿತಗೊಳಿಸುವ ಪ್ರಯತ್ನಗಳನ್ನು ತಪ್ಪಿಸಬೇಕು ಎಂದು ಸರ್ಕಾರ ಒತ್ತಿಹೇಳಿದೆ.
