ಆತ್ಮೀಯ ಅಗ್ನಿಯಲ್ಲಿ ಜ್ವಲಿಸಿದ ಐಪಿಸಿ ಕರಿಸ್ಮಾ ಮಹಾಸಮ್ಮೇಳನ


ಬೆಂಗಳೂರು/ಮೀನಂಗಾಡಿ:
ಕೇರಳದ ಮೀನಂಗಾಡಿಯ ಐಸಿಪಿಎಫ್ ಕ್ಯಾಂಪ್ ಸೆಂಟರ್‌ನಲ್ಲಿ ನಡೆದ ಐಪಿಸಿ ಕರಿಸ್ಮಾ ಸೆಂಟರ್ ಸೇವಕರ ಮಹಾಸಮ್ಮೇಳನವು ಆತ್ಮೀಯ ಉತ್ಸಾಹ, ಪ್ರಾರ್ಥನೆ ಹಾಗೂ ದೇವರ ವಾಕ್ಯದ ಶಕ್ತಿಯ ಮಧ್ಯೆ ಭಕ್ತಿಪೂರ್ಣವಾಗಿ ಸಮಾಪ್ತಿಯಾಯಿತು. ಮೂರು ದಿನಗಳ ಕಾಲ ನಡೆದ ಈ ಮಹಾಸಮ್ಮೇಳನದಲ್ಲಿ ಐಪಿಸಿ ಕರಿಸ್ಮಾ ಸೆಂಟರ್ ನ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಸೇವೆ ಮಾಡುವ ಸೇವಕರುಗಳು ಭಾಗವಹಿಸಿ ಆತ್ಮೀಯ ಆಶೀರ್ವಾದವನ್ನು ಹೊಂದಿದರು.

ಸಭೆಯ ಪ್ರಮುಖ ಸಂದೇಶವನ್ನು ಹಂಚಿಕೊಂಡ ಡಾ. ಜೇಕಬ್ ಅವರು, “ನಿಮ್ಮ ಹೆಸರು ಜೀವಭಾಧ್ಯರ ಪಟ್ಟಿಯಲ್ಲಿ ಬರೆಯಲ್ಪಟ್ಟಿರುವ ಭರವಸೆ ನಿಮಗಿದೆಯೇ?” ಎಂಬ ಆತ್ಮಪರಿಶೀಲನೆಯ ಕರೆಯ ಮೂಲಕ ಸಭಿಕರ ಹೃದಯಗಳನ್ನು ಸ್ಪರ್ಶಿಸಿದರು. ಬಳಿಕ ದೇವರ ವಾಕ್ಯ ಹಂಚಿಕೊಂಡ ಸಹೋದರ ಎಬಿ ಅವರು, “ನಮ್ಮ ಜೀವನದ ವಿರುದ್ಧವಾಗಿ ಬರುವ ಪ್ರತಿಯೊಂದು ಕತ್ತಿಯನ್ನು ಸ್ವರ್ಗೀಯ ಅಗ್ನಿಯಿಂದ ಜಯಿಸಬೇಕು” ಎಂದು ಪ್ರಬಲವಾಗಿ ಸಾರಿದರು.

ಯುವಜನರ ಆತ್ಮೀಯ ಬೆಳವಣಿಗೆಗೆ ವಿಶೇಷ ಒತ್ತು ನೀಡಿದ ನಿಸ್ಸಿ ಜಿಯೋ ಜೋಸ್ ಹಾಗೂ ಸುಜಿನ್ ಅಬ್ರಾಹಂ ಅವರು, ಇಂದಿನ ತಲೆಮಾರಿಗೆ ದೇವರ ಭಯ, ಪ್ರಾರ್ಥನೆ ಮತ್ತು ಪರಿಶುದ್ಧ ಜೀವನದ ಅಗತ್ಯವನ್ನು ಮನದಟ್ಟುಗೊಳಿಸಿದರು.

ಹಿರಿಯ ಸೇವಕರಾದ ಎನ್.ಕೆ. ಜಾರ್ಜ್, ಪಿ.ಪಿ. ಜೋಸೆಫ್ ಹಾಗೂ ಡ್ಯಾನಿಯಲ್ ಪಿ.ಜೆ ಅವರು ದೇವರ ವಾಕ್ಯವನ್ನು ಶಕ್ತಿಯುತವಾಗಿ ಸಾರುತ್ತಾ ಸಭೆಯನ್ನು ಆತ್ಮೀಯವಾಗಿ ಉಜ್ಜೀವನಗೊಳಿಸಿದರು.

ಸಮಾರೋಪ ದಿನದಲ್ಲಿ ಐಪಿಸಿ ಕರಿಸ್ಮಾ ಸೆಂಟರ್ ಅಧ್ಯಕ್ಷರೂ ಹಾಗೂ ಐಪಿಸಿ ಕರ್ನಾಟಕ ರಾಜ್ಯದ ಉಪಾಧ್ಯಕ್ಷರಾದ ಪಾಸ್ಟರ್ ಕೆ.ವಿ. ಜೋಸ್ ಅವರು ಮಾತನಾಡಿ, “ನಾವು ನಮ್ಮ ಸಮಯವನ್ನು ಎಲ್ಲಿ ವ್ಯರ್ಥ ಮಾಡುತ್ತಿದ್ದೇವೆ ಎಂಬುದನ್ನು ಪರಿಶೀಲಿಸೋಣ. ಆತ್ಮೀಯ ಜೀವನದಲ್ಲಿ ಸೋಮಾರಿತನಕ್ಕೆ ಜಾಗ ಕೊಡದೆ, ದೇವರು ಕೊಟ್ಟಿರುವ ಪ್ರತಿಯೊಂದು ಕ್ಷಣವನ್ನೂ ಕರ್ತನ ಸೇವೆಗೆ ಬಳಸೋಣ. ಈ ಭೂಮಿಯಲ್ಲಿ ನಾವು ಎಷ್ಟು ದಿನ ಜೀವಿಸುವೆವು ಎಂಬುದು ಯಾರಿಗೂ ಗೊತ್ತಿಲ್ಲ. ಆದ್ದರಿಂದ ಇರುವ ಸಮಯದಲ್ಲೇ ಅನೇಕರನ್ನು ಕ್ರಿಸ್ತನ ಕಡೆಗೆ ಕರೆತರುವ ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ” ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.

ಅವರು ಮುಂದುವರಿದು, ಅಪೋಸ್ತಲ ಪೌಲನು ಮಾಡಿದಂತೆ ಸುವಾರ್ತೆಗೆ ಸಂಪೂರ್ಣ ಸಮರ್ಪಿತರಾಗಿ, ಸಂಕಟಗಳ ಮಧ್ಯೆಯೂ ನಂಬಿಕೆಯನ್ನು ಕಾಪಾಡಿ ಆತ್ಮಗಳನ್ನು ಜಯಿಸುವ ಸೇವೆಯನ್ನು ನಾವು ಸಹ ಮಾಡಬೇಕು. ಪೌಲನು ಜಯ ಹೊಂದಿದ ರೀತಿಯಲ್ಲಿ ನಾವೂ ಆತ್ಮೀಯ ಓಟದಲ್ಲಿ ಜಯಶಾಲಿಗಳಾಗಬೇಕು. ಕರ್ತನ ಬರುವಿಕೆಗೆ ಸಿದ್ಧರಾಗಿರುವ ಪರಿಶುದ್ಧ ಜೀವನವೇ ನಮ್ಮ ಗುರಿಯಾಗಿರಲಿ ಎಂದು ಸಭೆಯನ್ನು ಉತ್ತೇಜಿಸಿದರು.

ಸಮ್ಮೇಳನದ ಕೊನೆಯ ದಿನದ ಆರಂಭದಲ್ಲಿ, ಯೇಸು ಕ್ರಿಸ್ತನು ತಾನೇ ಮಾದರಿಯಾಗಿ ತೋರಿಸಿದ ವಿನಯ ಮತ್ತು ಪ್ರೀತಿಯ ಸಂಕೇತವಾಗಿ ಶಿಷ್ಯರು ಪರಸ್ಪರ ಪಾದಗಳನ್ನು ತೊಳೆದರು. ಬಳಿಕ ಕರ್ತನ ಭೋಜನವನ್ನು ಭಕ್ತಿಪೂರ್ವಕವಾಗಿ ನಡೆಸಲಾಯಿತು.

ಭಾಗವಹಿಸಿದ್ದ ಅನೇಕ ಸೇವಕರು ದೇವರ ಸ್ಪರ್ಶವನ್ನು ಅನುಭವಿಸಿ, ಇನ್ನಷ್ಟು ಉತ್ಸಾಹ ಹಾಗೂ ಸಮರ್ಪಣೆಯೊಂದಿಗೆ ದೇವರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪ ವ್ಯಕ್ತಪಡಿಸಿದರು. ಮಹಾಸಮ್ಮೇಳನದ ಆರಾಧನೆಯನ್ನು ಕೊಯಂಬತ್ತೂರಿನ ಸೇವಕರಾದ ಪಿ.ಜೆ. ಡ್ಯಾನಿಯಲ್ ಅವರು ಆತ್ಮೀಯವಾಗಿ ನಡೆಸಿಕೊಟ್ಟರು.

ವರದಿ: ಪಾಸ್ಟರ್ ಫ್ರೆಡ್ಡಿ ಕೂರ್ಗ್

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW