ವಾಲ್ಪಾರೈ: ಒಂಬತ್ತು ಜನರ ಸಾವಿಗೆ ಕಾರಣವಾದ ಭೀಕರ ರಸ್ತೆ ಅಪಘಾತಕ್ಕೆ ಚಾಲಕರ ಅನುಭವದ ಕೊರತೆ ಹಾಗೂ ಅತಿಯಾದ ಬ್ರೇಕ್ ಬಳಕೆ ಪ್ರಮುಖ ಕಾರಣವೆಂದು ಪೊಳ್ಳಾಚಿ ಆರ್‌ಟಿಒ ತಿಳಿಸಿದೆ. ಹವಾಮಾನ ದೋಷ ಅಥವಾ ದೃಶ್ಯಮಾನತೆಯ ಕೊರತೆ ಈ ಅಪಘಾತಕ್ಕೆ ಕಾರಣವಾಗಿಲ್ಲವೆಂದು ಆರ್‌ಟಿಒ ಅಧಿಕಾರಿಯಾದ ಸೆಂಚಳಿಯನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಾಲ್ಪಾರೈ–ಪೊಳ್ಳಾಚಿ ಘಾಟ್ ರಸ್ತೆಯ 13ನೇ ಹೇರ್‌ಪಿನ್ ತಿರುವಿನಲ್ಲಿ ವಾಹನ ನಿಯಂತ್ರಣ ತಪ್ಪಿ ಸುಮಾರು 300 ಅಡಿ ಆಳಕ್ಕೆ ಉರುಳಿದೆ. ವಾಹನ ಹಲವು ಬಾರಿ ಪಲ್ಟಿ ಹೊಡೆದು 9ನೇ ತಿರುವಿನವರೆಗೆ ಬಿದ್ದಿತು. ಅಲ್ಲಿ ಗಾರ್ಡ್‌ರೇಲ್‌ಗೆ ಡಿಕ್ಕಿ ಹೊಡೆದು ಮರಕ್ಕೆ ತಗುಲಿ ನಿಂತಿದೆ.
ಮಲಪ್ಪುರಂ ಜಿಲ್ಲೆಯ ಪಾಂಗ್ ಪಳ್ಳಿಪ್ಪರಂಪ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಂಡವೇ ಈ ವಾಹನದಲ್ಲಿ ಪ್ರಯಾಣಿಸುತ್ತಿತ್ತು. ಅಪಘಾತದಲ್ಲಿ 7 ಮಹಿಳೆಯರು ಮತ್ತು ಒಬ್ಬ ಬಾಲಕ ಸೇರಿ 9 ಮಂದಿ ಮೃತಪಟ್ಟಿದ್ದಾರೆ. 4 ಮಂದಿ ಗಾಯಗೊಂಡಿದ್ದು, ಅವರಲ್ಲಿ 3 ಮಂದಿಯ ಸ್ಥಿತಿ ಗಂಭೀರವಾಗಿದೆ.
ಮೃತರು:
ಮುಖ್ಯೋಪಾಧ್ಯಾಯೆ ಅಜಿತಾ (54), ಶಿಕ್ಷಕಿಯರಾದ ರಂಲಾ (52), ಸುಹ್ರಾ (43), ಆಶಾ (41), ಅಬ್ದುಲ್ ಮಜೀದ್ (43), ಅವರ ಪತ್ನಿ ರುಖ್ಯಾ (39), ಅಡುಗೆ ಕೆಲಸಗಾರ್ತಿ ಸಾಜಿತಾ (45), ಸುಹ್ರಾ ಅವರ ಮಗ ಹಿಶಾಂ (12), ಸಮೀಪದ ಶಾಲೆಯ ಶಿಕ್ಷಕಿ ಶಕ್ಕೀನಾ (37).
ಡ್ರೈವರ್ ಮೊಹಮ್ಮದ್ ಫಾಹಿಸ್ (22) ಸೇರಿ 3 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ದುರ್ಘಟನೆ ಏಪ್ರಿಲ್ 17 ರಂದು ಸಂಜೆ 5:20ರ ಸುಮಾರಿಗೆ ಸಂಭವಿಸಿದೆ. ಪೊಳ್ಳಾಚಿ ಮಾರ್ಗವಾಗಿ ಊರಿಗೆ ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ.
