ಚಂಡೀಗಢ, ಏಪ್ರಿಲ್ 14: ಸಿಖ್ ಸಮುದಾಯದ ಪವಿತ್ರ ಧರ್ಮಗ್ರಂಥವಾದ ಗುರು ಗ್ರಂಥ್ ಸಾಹಿಬ್ಗೆ ಅವಮಾನ ಮಾಡುವ ಕೃತ್ಯಗಳನ್ನು ತಡೆಗಟ್ಟುವ ಉದ್ದೇಶದಿಂದ ಪಂಜಾಬ್ ವಿಧಾನಸಭೆಯಲ್ಲಿ ಮಂಡಿಸಲಾದ ಮಹತ್ವದ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದೆ.
ಮಸೂದೆ ಪ್ರಕಾರ, ಗುರು ಗ್ರಂಥ್ ಸಾಹಿಬ್ಗೆ ಅವಮಾನ ಮಾಡಿದವರಿಗೆ ಕನಿಷ್ಠ 10 ವರ್ಷದಿಂದ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ ಕನಿಷ್ಠ ₹5 ಲಕ್ಷದಿಂದ ಗರಿಷ್ಠ ₹25 ಲಕ್ಷದವರೆಗೆ ದಂಡ ವಿಧಿಸುವ ವ್ಯವಸ್ಥೆ ಮಾಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಧರ್ಮನಿಂದನೆ ಪ್ರಕರಣಗಳನ್ನು ತಡೆಯಲು ಈ ಕಾನೂನು ಬಲವಾದ ಕ್ರಮವಾಗಲಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಮಟ್ಟದ ಮಸೂದೆಯಾಗಿರುವುದರಿಂದ ರಾಷ್ಟ್ರಪತಿಗಳ ಅಂಕಿತದ ಅಗತ್ಯವಿಲ್ಲ. ರಾಜ್ಯಪಾಲರ ಒಪ್ಪಿಗೆ ದೊರೆತ ಬಳಿಕ ಮಸೂದೆ ಕಾಯ್ದೆಯಾಗಿ ಜಾರಿಗೆ ಬರಲಿದೆ.
ಇತ್ತೀಚಿನ ದಿನಗಳಲ್ಲಿ ಧರ್ಮಗ್ರಂಥ ಅವಮಾನಕ್ಕೆ ಸಂಬಂಧಿಸಿದ ಘಟನೆಗಳು ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಕಾನೂನು ಇತರ ಧರ್ಮಗಳ ಗ್ರಂಥಗಳಿಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಲಾಗಿದೆ.
