ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜನ್ಮದಿನದ ಅಂಗವಾಗಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ದೊಡ್ಡ ನಾಗಮಂಗಲದಲ್ಲಿ ಅಂಬೇಡ್ಕರ್ ಜಯಂತಿಯನ್ನು ಸಡಗರ ಹಾಗೂ ಗೌರವಭಾವದಿಂದ ಆಚರಿಸಲಾಯಿತು.
ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ಮಕ್ಕಳ ರಕ್ಷಣಾ ವೇದಿಕೆ ಧಾರ್ಮಿಕ ಹಾಗೂ ದತ್ತಿ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಟ್ರಸ್ಟ್‌ನ ಸಂಸ್ಥಾಪಕಿ ಹಾಗೂ ರಾಜ್ಯಾಧ್ಯಕ್ಷೆ ಗೀತಾ ಪಿ. ಅವರ ನೇತೃತ್ವದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ವಸಂತಣ್ಣ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅಂಬೇಡ್ಕರ್ ಅವರ ತತ್ವಗಳು, ಭಾರತದ ಸಂವಿಧಾನದ ಮಹತ್ವ ಹಾಗೂ ಸಾಮಾಜಿಕ ಸಮಾನತೆಯ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು. “ಅಂಬೇಡ್ಕರ್ ಅವರ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಪ್ರತಿಯೊಬ್ಬರೂ ಸಂವಿಧಾನದ ಮೌಲ್ಯಗಳನ್ನು ಪಾಲಿಸಬೇಕು” ಎಂದು ಅವರು ಅಭಿಪ್ರಾಯಪಟ್ಟರು.
ರಾಜರಾಜೇಶ್ವರಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ ನೂರಾರು ಸಾರ್ವಜನಿಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಾಬಾಸಾಹೇಬರ ಸ್ಮರಣೆಗೆ ಗೌರವ ಸಲ್ಲಿಸಿದರು.
