ಕೊಡ್ಲಿಪೇಟೆಯಲ್ಲಿ ಈದ್ ಮಿಲಾದ್ ಸಿದ್ಧತೆ: ಶಾಂತಿ ಸುವ್ಯವಸ್ಥೆಗೆ ಪೊಲೀಸ್ ಸಭೆ


ಕೊಡ್ಲಿಪೇಟೆ: ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆಯಲಿರುವ ಮೀಲಾದ್ ಸಂದೇಶ ಜಾಥಾ ಹಾಗೂ ವೇದಿಕೆ ಕಾರ್ಯಕ್ರಮವನ್ನು ಶಾಂತಿಯುತವಾಗಿ ಮತ್ತು ಸೌಹಾರ್ದಯುತವಾಗಿ ನಡೆಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಜಾಥಾ ಸಾಗುವ ಮಾರ್ಗ, ಸಂಚಾರ ವ್ಯವಸ್ಥೆ, ಪೊಲೀಸ್ ಭದ್ರತೆ ಸೇರಿದಂತೆ ಕಾರ್ಯಕ್ರಮದ ವೇಳೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅಧಿಕಾರಿಗಳು ಹಾಗೂ ಮಸೀದಿ ಸಮಿತಿಗಳ ಪ್ರಮುಖರೊಂದಿಗೆ ಚರ್ಚಿಸಲಾಯಿತು.

ಶನಿವಾರಸಂತೆ ಠಾಣೆಯ ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್ ಮಾತನಾಡಿ, ಈದ್ ಮಿಲಾದ್ ಕಾರ್ಯಕ್ರಮವು ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಶಾಂತಿಯುತವಾಗಿ ನಡೆಯಬೇಕು. ಕಾರ್ಯಕ್ರಮದ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಆಯೋಜಕರು ಪೊಲೀಸ್ ಇಲಾಖೆಯೊಂದಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ಸಂದೇಶವನ್ನು ಸಾರುವ ರೀತಿಯಲ್ಲಿ ಈದ್ ಮಿಲಾದ್ ಆಚರಣೆಯನ್ನು ನಡೆಸಬೇಕು ಎಂದು ಅವರು ಕರೆ ನೀಡಿದರು. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಸೂಚಿಸಿದರು.


ಸಭೆಯಲ್ಲಿ ಈದ್ ಮಿಲಾದ್ ಅಂಗವಾಗಿ ಆಯೋಜಿಸಿರುವ ವೇದಿಕೆ ಕಾರ್ಯಕ್ರಮ ಹಾಗೂ ಮೀಲಾದ್ ಸಂದೇಶ ಜಾಥಾದ ಕುರಿತು ವಿವಿಧ ಮಸೀದಿ ಸಮಿತಿಗಳ ಪ್ರಮುಖರು ಮಾಹಿತಿ ನೀಡಿದರು.

ಸಭೆಯಲ್ಲಿ ಕೊಡ್ಲಿಪೇಟೆ ಜಾಮೀಯಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಜಾಫರ್ ಸಾದಿಕ್, ಕಾರ್ಯದರ್ಶಿ ಮನ್ಸೂರ್ ಸಾಬ್, ಮದ್ರಸ ಸಮಿತಿ ಅಧ್ಯಕ್ಷ ಶಾಹಿದ್ ಹಾಗೂ ಪದಾಧಿಕಾರಿಗಳು, ಹ್ಯಾಂಡ್‌ಪೋಸ್ಟ್ ಮಸ್ಜಿದ್ ಆಡಳಿತ ಸಮಿತಿ ಕಾರ್ಯದರ್ಶಿ ಹನೀಫ್ ಎಂ.ಎಂ., ಖಜಾಂಜಿ ಬಾಸಿತ್, ಸದಸ್ಯ ಸಾಬ್ಜಾನ್, ಮುಖಂಡ ಔರಂಗಜೇಬ್, ಕಲ್ಲಾರೆ ಮಸ್ಜಿದ್‌ನ ದಾವೂದ್ ಶಾಂತಪುರ ಸೇರಿದಂತೆ ವಿವಿಧ ಮಸೀದಿ ಸಮಿತಿಗಳ ಪ್ರಮುಖರು ಭಾಗವಹಿಸಿದ್ದರು.

ಕೊಡ್ಲಿಪೇಟೆ ಉಪ ಠಾಣೆಯ ಎ.ಎಸ್.ಐ. ಲಕ್ಷ್ಮಿ ಪ್ರಸಾದ್ ರೈ, ಪೊಲೀಸ್ ಸಿಬ್ಬಂದಿ ಮುನಾವರ್ ಪಾಷಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW