ಕೊಡ್ಲಿಪೇಟೆ: ಪಡಿತರ ಚೀಟಿ ಪಡೆಯಲು ಎದುರಾಗುತ್ತಿರುವ ಸರ್ವರ್ ಸಮಸ್ಯೆಯಿಂದಾಗಿ ಜನಸಾಮಾನ್ಯರು, ವಿಶೇಷವಾಗಿ ಬಡವರು ಹಾಗೂ ಕೂಲಿ ಕಾರ್ಮಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಕೊಡ್ಲಿಪೇಟೆ ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹನೀಫ್ ಎಂ.ಎಂ. ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ತಿಂಗಳ ಅಂತ್ಯ ಸಮೀಪಿಸುತ್ತಿದ್ದರೂ, ಪಡಿತರ ಅಕ್ಕಿ ಪಡೆಯಲು ಅರ್ಹರಾಗಿರುವವರಲ್ಲಿ ಅರ್ಧದಷ್ಟು ಮಂದಿಗೆ ಇನ್ನೂ ಪಡಿತರ ಚೀಟಿ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿ ಪಡೆಯುವ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಇದರಿಂದ ಬಡ ಹಾಗೂ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೂಲಿ ಕಾರ್ಮಿಕರು ಪ್ರತಿನಿತ್ಯ ಕೆಲಸಕ್ಕೆ ತೆರಳಿ ಜೀವನ ನಿರ್ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದಾರೆ. ಆದರೆ ಪಡಿತರ ಚೀಟಿ ಪಡೆಯಲು ತಮ್ಮ ದಿನದ ಕೆಲಸವನ್ನು ಬದಿಗೊತ್ತಿ ಕಚೇರಿ ಹಾಗೂ ಸಂಬಂಧಪಟ್ಟ ಕೇಂದ್ರಗಳಿಗೆ ತೆರಳಿ ಹೆಬ್ಬೆಟ್ಟು ನೀಡಿ ಗಂಟೆಗಟ್ಟಲೆ ಕಾಯಬೇಕಾಗಿದೆ. ಈ ವೇಳೆ ಸರ್ವರ್ ಕೈಕೊಟ್ಟರೆ ಚೀಟಿ ಪಡೆಯುವ ಕೆಲಸವೂ ಆಗದೆ, ಅಂದಿನ ಕೂಲಿಯೂ ತಪ್ಪುವಂತಾಗಿದೆ ಎಂದು ಹನೀಫ್ ಎಂ.ಎಂ. ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಡಿತರ ಚೀಟಿಗಾಗಿ ಫಲಾನುಭವಿಗಳು ಹಲವು ಬಾರಿ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಇದರಿಂದ ವೃದ್ಧರು, ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಸರ್ಕಾರದ ಅನ್ನಭಾಗ್ಯ ಯೋಜನೆಯ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ದೊರೆಯಬೇಕಾದರೆ ಸರ್ವರ್ ಸಮಸ್ಯೆಯನ್ನು ತಕ್ಷಣವೇ ಪರಿಹರಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ತಾಂತ್ರಿಕ ಸಮಸ್ಯೆಯನ್ನು ಪರಿಶೀಲಿಸಿ ಸರ್ವರ್ ವ್ಯವಸ್ಥೆಯನ್ನು ಸಮರ್ಪಕಗೊಳಿಸುವುದರ ಜೊತೆಗೆ, ಬಾಕಿ ಇರುವ ಫಲಾನುಭವಿಗಳಿಗೆ ಶೀಘ್ರವಾಗಿ ಪಡಿತರ ಚೀಟಿ ವಿತರಿಸಿ ಅಕ್ಕಿ ಪಡೆಯಲು ಅನುಕೂಲ ಮಾಡಿಕೊಡಬೇಕು. ಮುಂದಿನ ದಿನಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆಯುವ ಸಂದರ್ಭದಲ್ಲಿ ಇಂತಹ ತಾಂತ್ರಿಕ ಸಮಸ್ಯೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಹನೀಫ್ ಎಂ.ಎಂ. ಅವರು ಒತ್ತಾಯಿಸಿದ್ದಾರೆ.
