ಕೊಡ್ಲಿಪೇಟೆ: ಈದ್-ಮಿಲಾದ್ ಅಂಗವಾಗಿ ಕೊಡ್ಲಿಪೇಟೆಯಲ್ಲಿ ಬುಧವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಭವ್ಯ ರ‍್ಯಾಲಿ ನಡೆಯಿತು.
ಕೊಡ್ಲಿಪೇಟೆಯ ಜಾಮೀಯಾ ಮಸೀದಿಯಿಂದ ಆರಂಭಗೊಂಡ ರ‍್ಯಾಲಿಯು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿ, ಬಸ್ ನಿಲ್ದಾಣ, ಪೆಟ್ರೋಲ್ ಬಂಕ್‌ವರೆಗೆ ತೆರಳಿ, ಬಳಿಕ ಶಾಂತಪುರ ಕಾನ್ವೆಂಟ್ ಸರ್ಕಲ್‌ವರೆಗೆ ಸಾಗಿತು. ರ‍್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
ಬೈಸಿಕಲ್‌ಗಳು, ದ್ವಿಚಕ್ರ ವಾಹನಗಳು ಹಾಗೂ ನಾಲ್ಕು ಚಕ್ರದ ವಾಹನಗಳನ್ನು ವಿವಿಧ ರೀತಿಯಲ್ಲಿ ಅಲಂಕರಿಸಲಾಗಿದ್ದು, ರ‍್ಯಾಲಿಗೆ ವಿಶೇಷ ಮೆರುಗು ತಂದವು. ಪ್ರವಾದಿ ಮುಹಮ್ಮದ್ (ಸ.ಅ) ಅವರ ಜನ್ಮದಿನದ ಸಂದೇಶ ಸಾರುವ ಘೋಷಣೆಗಳು ಹಾಗೂ ಮೀಲಾದ್ ಶುಭಾಶಯಗಳೊಂದಿಗೆ ರ‍್ಯಾಲಿ ಶಾಂತಿಯುತವಾಗಿ ನಡೆಯಿತು. ಅತ್ಯುತ್ತಮವಾಗಿ ಅಲಂಕರಿಸಲಾದ ವಾಹನಗಳಿಗೆ ಬಹುಮಾನ ನೀಡಿ ಭಾಗವಹಿಸಿದವರನ್ನು ಪ್ರೋತ್ಸಾಹಿಸಲಾಯಿತು.
ರ‍್ಯಾಲಿಯು ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯಲು ಆಯೋಜಕರು ಅಗತ್ಯ ಸಹಕಾರ ನೀಡಿದರು. ಜಾಮೀಯಾ ಮಸೀದಿ ಧರ್ಮಗುರು ಜಬೀರ್ ರಝ್ವಿ, ಮದ್ರಸ ಮುಖ್ಯ ಅಧ್ಯಾಪಕ ಸಯ್ಯದ್ ಅಬ್ದುಲ್ ಶುಕೂರ್, ಜಾಮೀಯಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಜಾಫರ್ ಸಾದಿಕ್, ಉಪಾಧ್ಯಕ್ಷ ಸರ್ದಾರ್, ಕಾರ್ಯದರ್ಶಿ ಜಮ್ಸೀದ್, ಖಜಾಂಜಿ ಶಾಹಿದ್ ಸೇರಿದಂತೆ ಇತ್ತೆಹಾದುಲ್ ಮುಸ್ಲಿಮೀನ್ ಅಹ್ಲೆಸುನ್ನತ್ ಮದ್ರಸ ಸಮಿತಿ ಅಧ್ಯಕ್ಷ ಶಾಹಿದ್ ರಹ್ಮತುಲ್ಲಾ, ಉಪಾಧ್ಯಕ್ಷ ಹನೀಫ್, ಕಾರ್ಯದರ್ಶಿ ಪ್ಯೆರೋಝ್ ಖಾದ್ರಿ, ಜಂಟಿ ಕಾರ್ಯದರ್ಶಿ ಅಬ್ರಾರ್ ಬಾಷ, ಖಜಾಂಜಿ ಖಲೀಲ್ ಅಹ್ಮದ್ ಹಾಗೂ ಸದಸ್ಯರು ಮತ್ತು ಮುಖಂಡರಾದ ಔರಂಗಜೇಬ್, ವಹಾಬ್ ಮತ್ತಿತರರು ಉಪಸ್ಥಿತರಿದ್ದರು.
ಶನಿವಾರಸಂತೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ವಿ. ಕೃಷ್ಣರಾಜ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು.
ಈದ್-ಮಿಲಾದ್ ಪ್ರಯುಕ್ತ ಬುಧವಾರ ಸಂಜೆ ಮದ್ರಸ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗುರುವಾರ ರಾತ್ರಿ ಧಾರ್ಮಿಕ ಪ್ರವಚನ ಮತ್ತು ಅನ್ನದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
