ಕೆಎಸ್‌ಆರ್‌ಟಿಸಿ ಬಸ್–ಬೈಕ್ ಅಪಘಾತ: ಮಹಿಳೆ ಸಾವು, 70 ವರ್ಷದ ನಿವೃತ್ತ ಪೋಸ್ಟ್‌ಮ್ಯಾನ್‌ಗೆ ಗಾಯ


ಕೊಡ್ಲಿಪೇಟೆ: ಅರಕಲಗೂಡು ಕಡೆಯಿಂದ ಕೊಡ್ಲಿಪೇಟೆ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ನಿಲುವಾಗಿಲು ಕಡೆಗೆ ತೆರಳುತ್ತಿದ್ದ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 65 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಸುಮಾರು 70 ವರ್ಷದ ನಿವೃತ್ತ ಪೋಸ್ಟ್‌ಮ್ಯಾನ್ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತರನ್ನು ಮಂಜುಳ (65) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ನೀರುಗುಂದ ಗ್ರಾಮದ ನಿವಾಸಿ, ನಿವೃತ್ತ ಪೋಸ್ಟ್‌ಮ್ಯಾನ್ ದೇವಪ್ಪ ಎನ್ ಯು (ಸುಮಾರು 70 ವರ್ಷ) ಅವರು ಕಾಲಿಗೆ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅರಕಲಗೂಡು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಕೊಡ್ಲಿಪೇಟೆ ಎಎಸ್‌ಐ ಲಕ್ಷ್ಮೀ ಪ್ರಸಾದ್ ರೈ ಹಾಗೂ ಶನಿವಾರಸಂತೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಅಪಘಾತದಲ್ಲಿ ಭಾಗಿಯಾಗಿರುವ ಕೆಎಸ್‌ಆರ್‌ಟಿಸಿ ಬಸ್‌ನ ನೋಂದಣಿ ಸಂಖ್ಯೆ KA-13-F-2211 ಹಾಗೂ ಬೈಕ್‌ನ ನೋಂದಣಿ ಸಂಖ್ಯೆ KA-12-R-9392 ಎಂದು ತಿಳಿದುಬಂದಿದೆ.

ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಘಟನೆ ಕುರಿತು ಶನಿವಾರಸಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW