ಸಮಾಜಸೇವೆಯ ಹಾದಿಯಲ್ಲಿ ರೋಟರಿ ಹೇಮಾವತಿ; ಭಾನು ಪ್ರಕಾಶ್ ನೇತೃತ್ವದ ಹೊಸ ತಂಡಕ್ಕೆ ಚಾಲನೆ


ಕೊಡ್ಲಿಪೇಟೆ :
ಕೊಡ್ಲಿಪೇಟೆ ಹೇಮಾವತಿ ರೋಟರಿ ಸಂಸ್ಥೆಯ 2026–27ನೇ ಸಾಲಿನ ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಪಟ್ಟಣದ ಉದಯ್ ಕಂಫರ್ಟ್ ಸಭಾಂಗಣದಲ್ಲಿ ಗುರುವಾರ ವಿಜೃಂಭಣೆಯಿಂದ ನಡೆಯಿತು.

ಪದಗ್ರಹಣಾಧಿಕಾರಿಯಾಗಿ ಭಾಗವಹಿಸಿದ್ದ ರೋಟರಿ ಹಿರಿಯ ನಾಯಕ ಪ್ರಕಾಶ್ ಕಾರಂತ್ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು. "ರೋಟರಿಯಲ್ಲಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬದಲಾಗಬಹುದು. ಆದರೆ ರೋಟರಿಯ ಸೇವಾ ಮನೋಭಾವ ಮತ್ತು ಧ್ಯೇಯೋದ್ದೇಶಗಳು ಎಂದಿಗೂ ಬದಲಾಗುವುದಿಲ್ಲ. ಸಮಾಜಮುಖಿ ಸೇವಾ ಕಾರ್ಯಕ್ರಮಗಳ ಮೂಲಕ ಹೇಮಾವತಿ ರೋಟರಿ ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಳ್ಳಬೇಕು. ಸೇವೆ ಮಾಡುವುದು ಮಾತ್ರವಲ್ಲ, ಅದರ ಫಲ ಜನರಿಗೆ ತಲುಪಬೇಕು. ಜನರ ಮುಖದಲ್ಲಿ ನಗು ಮೂಡಿಸುವ ಸೇವೆಯೇ ನಿಜವಾದ ಯಶಸ್ಸು" ಎಂದು ಹೇಳಿದರು. ರೋಟರಿಯ ವಿಶ್ವಪ್ರಸಿದ್ಧ 'ಪಲ್ಸ್ ಪೋಲಿಯೊ' ಅಭಿಯಾನವನ್ನು ಉದಾಹರಿಸಿ, ಸಮಾಜದ ವಿಶ್ವಾಸ ಗಳಿಸುವ ಸೇವಾ ಕಾರ್ಯಗಳನ್ನು ಕೈಗೊಳ್ಳುವಂತೆ ಕರೆ ನೀಡಿದರು.

ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಅವರು ನೂತನ ಅಧ್ಯಕ್ಷ ಭಾನು ಪ್ರಕಾಶ್ ಅವರನ್ನು ಸನ್ಮಾನಿಸಿ ಆಶೀರ್ವಚನ ನೀಡಿದರು. ಸಮಾಜಮುಖಿ ಕಾರ್ಯಗಳಲ್ಲಿ ರೋಟರಿಯಂತಹ ಸಂಸ್ಥೆಗಳ ಪಾತ್ರ ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು. ಕೊಡ್ಲಿಪೇಟೆಯಲ್ಲಿ ರೋಟರಿ ಸಂಸ್ಥೆ ಇದುವರೆಗೆ ಕೈಗೊಂಡಿರುವ ಸಾರ್ವಜನಿಕ ಸೇವಾ ಕಾರ್ಯಗಳನ್ನು ಅವರು ಪ್ರಶಂಸಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೋಟರಿ ಸಹಾಯಕ ರಾಜ್ಯಪಾಲ ವಸಂತ್ ಕುಮಾರ್ ಹಾಗೂ ರೋಟರಿ ವಲಯ ಸೇನಾನಿ ಮಲ್ಲೇಶ್ ಎ.ಎಸ್. ಅವರು ನಿರ್ಗಮಿತ ಹಾಗೂ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ ಮಾತನಾಡಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸ್ಥಳೀಯ ಗಣ್ಯರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಹಾಸನ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಜಗದೀಶ್, ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ವ್ಯಾಕ್ಸಿನೇಷನ್ ಸಂಶೋಧನೆಯಲ್ಲಿ ಸಾಧನೆ ಮಾಡಿರುವ ವೇದಾಂತ್ ಬೆಲ್ಲದ್ ಹಾಗೂ ನೀಟ್ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿ ಕಾರವಾರ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿರುವ ಡಿಸೀಲ್ ಡಿ.ಕೆ. ಅವರನ್ನು ರೋಟರಿ ವತಿಯಿಂದ ಗೌರವಿಸಲಾಯಿತು. ಸನ್ಮಾನಿತರು ತಮ್ಮ ಸಾಧನೆಯ ಪಯಣವನ್ನು ಹಂಚಿಕೊಂಡು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಒಂಬತ್ತು ಮಹಿಳೆಯರು ಸೇರಿದಂತೆ 12 ಮಂದಿ ನೂತನ ಸದಸ್ಯರು ರೋಟರಿ ಸಂಸ್ಥೆಗೆ ಸೇರ್ಪಡೆಯಾದರು.

ನೂತನ ಅಧ್ಯಕ್ಷರಾಗಿ ಭಾನು ಪ್ರಕಾಶ್ ಹಾಗೂ ಕಾರ್ಯದರ್ಶಿಯಾಗಿ ಮೋಹನ್ ಕುಮಾರ್ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಅಧ್ಯಕ್ಷ ಉಮೇಶ್ ಯು.ಎಚ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಣೇಶ್ ಚೌದರಿ ಸ್ವಾಗತಿಸಿದರು. ವಲಯ ಉಪಾಧ್ಯಕ್ಷ ಹೆಚ್.ಎಂ. ದಿವಾಕರ್ ಕಾರ್ಯಕ್ರಮ ನಿರೂಪಿಸಿದರು. ನೂತನ ಅಧ್ಯಕ್ಷ ಭಾನು ಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿ, ಕಾರ್ಯದರ್ಶಿ ಮೋಹನ್ ಕುಮಾರ್ ವಂದಿಸಿದರು.

ಕಾರ್ಯಕ್ರಮದಲ್ಲಿ ಡಾ. ಉದಯ್ ಕುಮಾರ್, ಪಿ.ಕೆ. ರವಿ, ಲಿಖಿತ್, ಸುಂದರ್ (ಸೋಮವಾರಪೇಟೆ), ಸಂಜೀವ್ ಪೂಜಾರಿ (ಮಂಗಳೂರು), ಸಂಸ್ಥೆಯ ಮಾಜಿ ಅಧ್ಯಕ್ಷರಾದ ಪ್ರವೀಣ್, ದಿನೇಶ್, ಅಮೃತ್ ಕುಮಾರ್, ಯತೀಶ್, ಮಾಧವ್ ಲಾಲ್ ಸೇರಿದಂತೆ ಹೇಮಾವತಿ ರೋಟರಿಯ ಸದಸ್ಯರು, ಅವರ ಕುಟುಂಬಸ್ಥರು, ಶನಿವಾರಸಂತೆ, ಆಲೂರು-ಸಿದ್ದಾಪುರ, ಮಡಿಕೇರಿ ಹಾಗೂ ಕುಶಾಲನಗರ ರೋಟರಿ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW