“ಯುವ ಹೆಜ್ಜೆಗಳು… ಉತ್ತಮ ಸಮಾಜದತ್ತ” ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಕಾರ್ಯಕ್ರಮವು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಜರುಗಲಿದೆ.
ಕಾರ್ಯಕ್ರಮದಲ್ಲಿ ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಪಾಸ್ಟರ್ ಜೋಯಲ್ ಪೊನ್ನಪ್ಪ ಹಾಗೂ ಶನಿವಾರಸಂತೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪಾಸ್ಟರ್ ಜೋಯಲ್ ಪೊನ್ನಪ್ಪ ಅವರು ಪವಿತ್ರ ಗ್ರಂಥದ ಆಧಾರದಲ್ಲಿ ಆತ್ಮಿಕ ಸಂದೇಶ ನೀಡಲಿದ್ದು, ಯುವಜನರಲ್ಲಿ ನಂಬಿಕೆ, ಉತ್ತಮ ಮೌಲ್ಯಗಳು, ಸಕಾರಾತ್ಮಕ ಚಿಂತನೆ ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.
ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್ ಅವರು ಸಂಚಾರ ನಿಯಮಗಳು, ಬಾಲ್ಯವಿವಾಹ ತಡೆ, ಪೋಕ್ಸೋ ಕಾಯ್ದೆ, ಸೈಬರ್ ಅಪರಾಧಗಳು ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಕಾನೂನು ಅರಿವು ಮೂಡಿಸಲಿದ್ದಾರೆ. ರಸ್ತೆ ಸುರಕ್ಷತೆ, ಮಕ್ಕಳ ರಕ್ಷಣೆ ಮತ್ತು ಡಿಜಿಟಲ್ ಜಗತ್ತಿನಲ್ಲಿ ಸುರಕ್ಷಿತವಾಗಿರುವುದರ ಮಹತ್ವದ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ.
ಯುವಜನರು ಆತ್ಮಿಕವಾಗಿ ಬಲಿಷ್ಠರಾಗುವುದರ ಜೊತೆಗೆ ಕಾನೂನುಗಳನ್ನು ಗೌರವಿಸಿ, ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಸಮಾಜದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಈ ಕೂಟದ ಪ್ರಮುಖ ಉದ್ದೇಶವಾಗಿದೆ
ಎಂದು ಕೆಪಿಸಿಎ ಅಧ್ಯಕ್ಷರಾದ ಪಾಸ್ಟರ್. ಅಬ್ರಹಾಂ ಕೊಶಿ ಹಾಗೂ ಕಾರ್ಯದರ್ಶಿ ಪಾ.ಮಂಜುನಾಥ್ ತಿಳಿಸಿದರು. ಪಾಸ್ಟರ್. ಅಬ್ರಹಾಂ ಕೊಶಿ ಹಾಗೂ ಪಾಸ್ಟರ್.ಫ್ರೆಡ್ಡಿ ಕೂರ್ಗ್ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.
