ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಕ್ರೈಸ್ತ ಸಮುದಾಯದ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಘೋಷಿಸಿರುವ ₹250 ಕೋಟಿ ಅನುದಾನದಲ್ಲಿ ಸುಮಾರು ₹85 ಕೋಟಿ ಮಾತ್ರ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ, ಉಳಿದ ಸಂಪೂರ್ಣ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕ ಕ್ರೈಸ್ತ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಸ್ಟ್ಯಾನಿ ಪಿಂಟೋ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಕ್ರೈಸ್ತ ಸಮುದಾಯದ ಅಭಿವೃದ್ಧಿಯನ್ನು ಕೇವಲ ಚರ್ಚ್‌ಗಳು, ಸಮಾಧಿ ಸ್ಥಳಗಳು ಹಾಗೂ ಸಮುದಾಯ ಭವನಗಳ ಮೂಲಸೌಕರ್ಯ ಅಭಿವೃದ್ಧಿಗೆ ಸೀಮಿತಗೊಳಿಸದೆ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಕಾರ್ಮಿಕರು, ಸಣ್ಣ ಉದ್ಯಮಿಗಳು ಹಾಗೂ ಸ್ವಯಂ ಉದ್ಯೋಗಿಗಳ ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕೂ ಅನುದಾನ ತಲುಪಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿವೇತನ, ಉನ್ನತ ಹಾಗೂ ವಿದೇಶಿ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಕೌಶಲ್ಯಾಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಉದ್ಯಮಶೀಲತೆಗೆ ಪ್ರತ್ಯೇಕ ಅನುದಾನ ಒದಗಿಸುವ ಅಗತ್ಯವಿದೆ. ₹85 ಕೋಟಿಯೊಳಗೆ ಇಷ್ಟೊಂದು ವ್ಯಾಪಕ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಕಷ್ಟಸಾಧ್ಯವಾಗಿದ್ದು, ಬಜೆಟ್‌ನಲ್ಲಿ ಘೋಷಿಸಿರುವ ₹250 ಕೋಟಿಯ ಸಂಪೂರ್ಣ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಸ್ಟ್ಯಾನಿ ಪಿಂಟೋ ಆಗ್ರಹಿಸಿದ್ದಾರೆ.
ಅನುದಾನವನ್ನು ಮೂಲಸೌಕರ್ಯ ಅಭಿವೃದ್ಧಿ ಮತ್ತು ವೈಯಕ್ತಿಕ ಫಲಾನುಭವಿಗಳ ಕಲ್ಯಾಣಕ್ಕೆ ಪ್ರತ್ಯೇಕವಾಗಿ ಹಂಚಿಕೆ ಮಾಡಿ, ಪಾರದರ್ಶಕವಾಗಿ ಅನುಷ್ಠಾನಗೊಳಿಸುವ ವ್ಯವಸ್ಥೆ ರೂಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಮನವಿಯನ್ನು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಲಾಗಿದ್ದು, ಬಾಕಿ ಇರುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ವರದಿ:ಫ್ರೆಡ್ಡಿ ಕೂರ್ಗ್
