ಕೊಡ್ಲಿಪೇಟೆ: ಕೊಡ್ಲಿಪೇಟೆ ಒಕ್ಕಲಿಗ ಯುವ ವೇದಿಕೆ ವತಿಯಿಂದ ಗುರುವಾರ ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಆಸ್ಪತ್ರೆಯ ಆವರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹುಲ್ಲು, ಕಳೆಗಿಡ ಹಾಗೂ ಬೇಡದ ಗಿಡಗಳು ಬೆಳೆದಿದ್ದ ಹಿನ್ನೆಲೆಯಲ್ಲಿ ಯುವ ವೇದಿಕೆಯ ಸದಸ್ಯರು ಸ್ವಯಂಪ್ರೇರಿತವಾಗಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿ, ಆಸ್ಪತ್ರೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು.
ಸ್ವಚ್ಛತಾ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ಅನಿರೀಕ್ಷಿತವಾಗಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಯುವ ವೇದಿಕೆಯ ಸಾಮಾಜಿಕ ಕಾಳಜಿಯ ಕಾರ್ಯವನ್ನು ಪ್ರಶಂಸಿಸಿದರು.
ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಸಚಿನ್ ಡಿ. ಮಾತನಾಡಿ, ಆಸ್ಪತ್ರೆಯ ಆವರಣವನ್ನು ಪರಿಶೀಲಿಸಿದಾಗ ಹೆಚ್ಚಿನ ಪ್ರಮಾಣದಲ್ಲಿ ಕಾಡು ಬೆಳೆದಿರುವುದು ಗಮನಕ್ಕೆ ಬಂದಿತ್ತು. ಇದರಿಂದ ಆಸ್ಪತ್ರೆಯ ಕೊಠಡಿಗಳಿಗೆ ಹಾವುಗಳು ಸೇರಿದಂತೆ ಸರಿಸೃಪಗಳು ಬರುವ ಸಾಧ್ಯತೆ ಇರುವುದನ್ನು ಮನಗಂಡು, ಯುವ ವೇದಿಕೆಯ ಸದಸ್ಯರು ಸ್ವಚ್ಛತಾ ಕಾರ್ಯಕ್ಕೆ ಮುಂದಾದರು ಎಂದು ಹೇಳಿದರು.
ಒಕ್ಕಲಿಗ ಯುವ ವೇದಿಕೆ ಕಾರ್ಯದರ್ಶಿ ಅವಿನಾಶ್ ಮಾತನಾಡಿ, ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಕೊಡ್ಲಿಪೇಟೆಯಲ್ಲಿರುವ ಯಾವುದೇ ಸರ್ಕಾರಿ ಜಾಗಗಳು ಸಾರ್ವಜನಿಕರ ಆಸ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಕೊಡ್ಲಿಪೇಟೆಯ ಎಲ್ಲ ಸಂಘಟನೆಗಳು ಹಾಗೂ ನಾಯಕರು ಯಾವುದೇ ಭೇದಭಾವವಿಲ್ಲದೆ ಸ್ವಚ್ಛತಾ ಕಾರ್ಯಗಳಲ್ಲಿ ಕೈಜೋಡಿಸಿದರೆ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಸಹಕಾರಿಯಾಗಲಿದೆ. ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಕುರಿತು ಮಾತನಾಡಿದ ಸ್ಥಳೀಯ ವೈದ್ಯಾಧಿಕಾರಿ ಡಾ. ಧನಿಕ, ತಾವು ಕಳೆದ ಮೂರು ವರ್ಷಗಳಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಸ್ಪತ್ರೆಯ ಸುತ್ತಮುತ್ತ ಸ್ವಚ್ಛತೆ ಕೈಗೊಳ್ಳುವಂತೆ ಹಲವು ಬಾರಿ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಎರಡು ದಿನಗಳ ಹಿಂದೆ ಆಸ್ಪತ್ರೆಯ ಪರಿಶೀಲನೆಗೆ ಉನ್ನತ ಅಧಿಕಾರಿಗಳು ಆಗಮಿಸಲಿರುವ ಹಿನ್ನೆಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೂ ಮನವಿ ಮಾಡಿದ್ದರೂ ಸ್ಪಂದನೆ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ಒಕ್ಕಲಿಗ ಯುವ ವೇದಿಕೆಯವರು ತಮ್ಮ ಮನವಿಗೆ ಸ್ಪಂದಿಸಿ ಆಸ್ಪತ್ರೆಯ ಸಂಪೂರ್ಣ ಪರಿಸರವನ್ನು ಸ್ವಚ್ಛಗೊಳಿಸಿದ್ದಾರೆ ಎಂದು ತಿಳಿಸಿದರು.
ಆಸ್ಪತ್ರೆಗೆ ಹೆರಿಗೆ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳಿಗೆ ಸಾರ್ವಜನಿಕರು ಆಗಮಿಸುವುದರಿಂದ ಪರಿಸರ ಸ್ವಚ್ಛವಾಗಿರುವುದು ಅತ್ಯಂತ ಅಗತ್ಯವಾಗಿದೆ. ಕಸ ಹಾಗೂ ಕೊಳಕು ಸಂಗ್ರಹದಿಂದ ಸೊಳ್ಳೆಗಳ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡು ಆಸ್ಪತ್ರೆಯ ಕಸವನ್ನು ಕನಿಷ್ಠ ವಾರಕ್ಕೆ ಎರಡು ಬಾರಿಯಾದರೂ ಕಸದ ವಾಹನದ ಮೂಲಕ ತೆರವುಗೊಳಿಸಬೇಕು ಎಂದು ಅವರು ಮಾಧ್ಯಮದ ಮೂಲಕ ಮನವಿ ಮಾಡಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಸಚಿನ್ ಡಿ., ಕಾರ್ಯದರ್ಶಿ ಅವಿನಾಶ್, ಉಪಾಧ್ಯಕ್ಷ ಪ್ರವೀಣ್, ಉಮೇಶ್, ಕಾಂತರಾಜ್, ದಯಾನಂದ್, ನಾಗೇಶ್, ಶೋಭಿತ್, ಕೀರ್ತ್, ದೇವರಾಜ್, ದಿನೇಶ್, ಸಂದೇಶ್, ಮಧು, ರುದ್ರೇಶ್, ಕಿಶೋರ್, ಯತೀಶ್, ಗಣೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.


