ಕೊಡ್ಲಿಪೇಟೆಯಲ್ಲಿ ಭುಗಿಲೆದ್ದ ಆಕ್ರೋಶ: ಪಂಚಾಯಿತಿ ವಿರುದ್ಧ ಜನಾಕ್ರೋಶ, ಅಂಗಡಿ-ಮುಂಗಟ್ಟು ಒಂದು ಗಂಟೆ ಬಂದ್


ಕೊಡ್ಲಿಪೇಟೆ: ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯ, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆಯ ಕೊರತೆ ಹಾಗೂ ವಿವಿಧ ಅಕ್ರಮಗಳ ಆರೋಪಗಳನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಸೋಮವಾರ ಕೊಡ್ಲಿಪೇಟೆಯಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಗೆ ಬೆಂಬಲ ಸೂಚಿಸಿ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಸುಮಾರು ಒಂದು ಗಂಟೆ ಕಾಲ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದರು.

ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದ ಸೋಮವಾರಪೇಟೆ ತಾಲೂಕು ನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ವಿ. ಅವರು, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ವರ್ಗಾವಣೆ ಮಾಡುವಂತೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ಕೂಡ ಪ್ರತಿಭಟನಾಕಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿ, PDO ವರ್ಗಾವಣೆ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.


ಎಸ್‌ಡಿಎಂಸಿ ಅಧ್ಯಕ್ಷ ವಸಂತ್ ಮಾತನಾಡಿ, ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ವಿಳಂಬಗೊಳಿಸಲಾಗುತ್ತಿದೆ ಹಾಗೂ ಅಧಿಕಾರಿಯವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಪಂಚಾಯಿತಿ ಕಚೇರಿಯಲ್ಲಿ ನಡೆಯಬೇಕಾದ ಕೆಲವು ಕೆಲಸ-ಕಾರ್ಯಗಳು ಹೋಟೆಲ್‌ಗಳು ಹಾಗೂ ಖಾಸಗಿ ವಾಹನಗಳಲ್ಲಿ ನಡೆಯುತ್ತಿರುವುದು ಕಂಡುಬರುತ್ತಿದೆ ಎಂದು ಆರೋಪಿಸಿದ ಅವರು, ಪಂಚಾಯಿತಿ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದರು. ಕೆಲವು ಅಭಿವೃದ್ಧಿ ಕಾಮಗಾರಿಗಳಲ್ಲಿ ಅಧಿಕಾರಿಯವರು ಗುತ್ತಿಗೆದಾರರ ಪ್ರಭಾವಕ್ಕೆ ಒಳಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ. ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಜವಾಬ್ದಾರಿತನ ಇರಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶೋಬಿತ್ ಗೌಡ ಮಾತನಾಡಿ, PDO ಅವರ ಕಾರ್ಯವೈಖರಿ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ ಎಂದು ಆರೋಪಿಸಿದರು. ಅಧಿಕಾರಿಯ ಕಾರ್ಯವೈಖರಿ ಕುರಿತು ಹಲವು ಬಾರಿ ಸೋಮವಾರಪೇಟೆ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು. PDO ಅವರು ಇನ್ನೂ ಆರು ತಿಂಗಳು ಪಂಚಾಯಿತಿಯಲ್ಲಿ ಮುಂದುವರಿದರೆ ಆಡಳಿತ ವ್ಯವಸ್ಥೆ ಮತ್ತಷ್ಟು ಹದಗೆಡಲಿದೆ ಎಂದು ಆರೋಪಿಸಿದರು.


ಅನಿಲ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎರಡು ಕುಡಿಯುವ ನೀರಿನ ಘಟಕಗಳು ಪದೇಪದೇ ಕೆಟ್ಟು ಹೋಗುತ್ತಿವೆ. ಈ ಹಿಂದೆ ₹5ಕ್ಕೆ ದೊರೆಯುತ್ತಿದ್ದ ನೀರಿನ ದರವನ್ನು ಇದೀಗ ₹10ಕ್ಕೆ ಹೆಚ್ಚಿಸಲಾಗಿದೆ. ದರ ಹೆಚ್ಚಳದಿಂದ ಸಂಗ್ರಹವಾಗುತ್ತಿರುವ ಆದಾಯವನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದನ್ನು ಪಂಚಾಯಿತಿ ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು.

ಭಾನುವಾರದ ಸಂತೆ ಮುಗಿದ ಬಳಿಕ ಸಮರ್ಪಕವಾಗಿ ಸ್ವಚ್ಛತೆ ಮಾಡದಿರುವುದರಿಂದ ಸಮೀಪದ ಎರಡು ಶಾಲೆಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಕೊಡ್ಲಿಪೇಟೆ ಒಕ್ಕಲಿಗ ಯುವ ವೇದಿಕೆ ಕಾರ್ಯದರ್ಶಿ ಅವಿನಾಶ್ ಆರೋಪಿಸಿದರು. ಸಂತೆ ಮುಗಿದ ತಕ್ಷಣ ಕಸ ಹಾಗೂ ತ್ಯಾಜ್ಯ ತೆರವುಗೊಳಿಸಿ, ವಿದ್ಯಾರ್ಥಿಗಳಿಗೆ ಸ್ವಚ್ಛ ವಾತಾವರಣ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕರು ಅರ್ಜಿ ಹಾಗೂ ಸಮಸ್ಯೆಗಳಿಗಾಗಿ ಪಂಚಾಯಿತಿಗೆ ಬಂದಾಗ PDO ಲಭ್ಯವಿರುವುದಿಲ್ಲ ಎಂಬ ಆರೋಪಗಳಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಸಚಿನ್ ಮಾತನಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಕಾರ್ಯವೈಖರಿ ಹಾಗೂ ಆಡಳಿತ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನವಿದೆ ಎಂದು ಹೇಳಿದರು. ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಬದಲು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಮೇಲಧಿಕಾರಿಗಳು ಅಧಿಕಾರಿಯ ಕಾರ್ಯವೈಖರಿಯ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಲೋಪಗಳು ದೃಢಪಟ್ಟರೆ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದೀರ್ಘ ವರ್ಷಗಳಿಂದ ತಮ್ಮ ಅಜ್ಜನ ಕಾಲದಿಂದಲೂ ಮಟನ್ ಅಂಗಡಿ ನಡೆಸಿಕೊಂಡು ಬರುತ್ತಿದ್ದ ಅಂಗಡಿ ಮಾಲೀಕ ಸಿದ್ದೀಕ್ ಮಾತನಾಡಿ, ಈ ಬಾರಿ ಅಂಗಡಿ ಪರವಾನಿಗೆಗಾಗಿ PDO ಅವರು ₹1.5 ಲಕ್ಷ ಪಾವತಿಸುವಂತೆ ಸೂಚಿಸಿದ್ದರು ಎಂದು ಆರೋಪಿಸಿದರು. ಅಷ್ಟು ಹಣ ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೇರೆ ಪಂಚಾಯಿತಿ ವ್ಯಾಪ್ತಿಗೆ ತೆರಳಿ ಅಂಗಡಿ ನಡೆಸುವ ಪರಿಸ್ಥಿತಿ ಎದುರಾಗಿದೆ ಎಂದರು.

ಇದೇ ಪಂಚಾಯಿತಿಯಲ್ಲಿ ಇತರರಿಗೆ ₹60 ಸಾವಿರಕ್ಕೆ ಅಂಗಡಿ ಪರವಾನಿಗೆ ನೀಡಲಾಗಿದೆ ಎಂದು ಆರೋಪಿಸಿದ ಅವರು, ಪರವಾನಿಗೆ ಮೊತ್ತದಲ್ಲಿ ಇಷ್ಟೊಂದು ವ್ಯತ್ಯಾಸಕ್ಕೆ ಕಾರಣವೇನು ಎಂಬುದನ್ನು ಪಂಚಾಯಿತಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಪಂಚಾಯಿತಿ ಸಾರ್ವಜನಿಕರ ಸೇವೆಗಾಗಿ ಇರುವ ಸಂಸ್ಥೆಯಾಗಿದ್ದು, ಅಧಿಕಾರಿಗಳು ನಿಯಮಾನುಸಾರ, ಪಾರದರ್ಶಕವಾಗಿ ಹಾಗೂ ಎಲ್ಲರಿಗೂ ಸಮಾನವಾಗಿ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.


ಪ್ರತಿಭಟನೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯ ವರ್ತಕರಾದ ಹೆಚ್ ಎಸ್ ಶಿವರಾಜ್, ರುದ್ರೇಶ್, ಸಾದಪ್ಪ , ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಹೆಚ್ಚಿನ ಭಾಗವಹಿಸಿದ್ದರು.ಅಹಿತಕರ ಘಟನೆಗಳು ನಡೆಯದಂತೆ ಶನಿವಾರಸಂತೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.



ವೀಕ್ಷಕ ವರದಿ:ಫ್ರೆಡ್ಡಿ ಕೊಡ್ಲಿಪೇಟೆ

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW