ಸೀಟ್ ಬೆಲ್ಟ್ ಹಾಕಲು ನಿರಾಕರಿಸಿದ ಮಗು; ವಿಮಾನವೇ ರದ್ದುಗೊಂಡು ಪ್ರಯಾಣಿಕರು ಪರದಾಟ


ವಿಕ್ಟೋರಿಯಾ: ಸೀಟ್ ಬೆಲ್ಟ್ ಹಾಕಿಕೊಳ್ಳಲು ಮಗು ನಿರಾಕರಿಸಿದ ಪರಿಣಾಮ, ಪೋರ್ಟರ್ ಏರ್‌ಲೈನ್ಸ್‌ನ ವಿಮಾನವೊಂದು ರದ್ದುಗೊಂಡು ನೂರಾರು ಪ್ರಯಾಣಿಕರು ತೊಂದರೆ ಅನುಭವಿಸಿದ ಘಟನೆ ಕೆನಡಾದ ವಿಕ್ಟೋರಿಯಾದಲ್ಲಿ ನಡೆದಿದೆ.

ಬ್ರಿಟಿಷ್ ಕೊಲಂಬಿಯಾದ ವಿಕ್ಟೋರಿಯಾದಿಂದ ಟೊರೊಂಟೋಗೆ ತೆರಳಬೇಕಿದ್ದ ಪೋರ್ಟರ್ ಏರ್‌ಲೈನ್ಸ್ ವಿಮಾನದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ವಿಮಾನ ಟೇಕ್‌ಆಫ್‌ಗೆ ಸಿದ್ಧವಾಗಿ ರನ್‌ವೇ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ವಿಮಾನದಲ್ಲಿದ್ದ ಮಗು ತನ್ನ ಸೀಟಿನ ಮೇಲೆ ನಿಂತುಕೊಂಡು ಸೀಟ್ ಬೆಲ್ಟ್ ಧರಿಸಲು ನಿರಾಕರಿಸಿದೆ.

ಮಗುವಿನ ಪೋಷಕರು ಹಾಗೂ ಕ್ಯಾಬಿನ್ ಸಿಬ್ಬಂದಿ ಹಲವು ಬಾರಿ ಮನವೊಲಿಸಲು ಪ್ರಯತ್ನಿಸಿದರೂ ಮಗು ಸೀಟ್ ಬೆಲ್ಟ್ ಹಾಕಿಕೊಳ್ಳಲು ಒಪ್ಪಲಿಲ್ಲ. ವಿಮಾನಯಾನದ ಸುರಕ್ಷತಾ ನಿಯಮಗಳನ್ನು ಪಾಲಿಸದೆ ವಿಮಾನ ಹಾರಾಟ ನಡೆಸಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ, ಸಿಬ್ಬಂದಿ ವಿಮಾನವನ್ನು ಮರಳಿ ಟರ್ಮಿನಲ್‌ಗೆ ಕರೆತರುವ ನಿರ್ಧಾರ ಕೈಗೊಂಡರು.

ನಂತರ ಮಗುವನ್ನು ಹಾಗೂ ಅದರ ಪೋಷಕರನ್ನು ಸಾಮಾನುಗಳ ಸಮೇತ ವಿಮಾನದಿಂದ ಕೆಳಗಿಳಿಸಲಾಯಿತು. ಈ ಪ್ರಕ್ರಿಯೆ ಪೂರ್ಣಗೊಳ್ಳುವಷ್ಟರಲ್ಲಿ ರಾತ್ರಿ 12.30 ದಾಟಿತ್ತು. ಇದೇ ವೇಳೆ ವಿಮಾನ ನಿಲ್ದಾಣದ ರನ್‌ವೇ ಮುಚ್ಚಿದ್ದರಿಂದ ವಿಮಾನವನ್ನು ಆ ರಾತ್ರಿ ಟೇಕ್‌ಆಫ್ ಮಾಡಲು ಸಾಧ್ಯವಾಗಲಿಲ್ಲ.

ಇದರ ಪರಿಣಾಮ ವಿಮಾನದಲ್ಲಿದ್ದ ಇತರ ಎಲ್ಲ ಪ್ರಯಾಣಿಕರೂ ವಿಕ್ಟೋರಿಯಾದಲ್ಲೇ ರಾತ್ರಿ ಕಳೆಯಬೇಕಾಯಿತು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಪೋರ್ಟರ್ ಏರ್‌ಲೈನ್ಸ್ ಕ್ಷಮೆಯಾಚಿಸಿದೆ.

ವಿಮಾನಯಾನ ಸಂಸ್ಥೆಯ ವಕ್ತಾರರ ಪ್ರಕಾರ, ವಿಮಾನದಲ್ಲಿರುವ ಪ್ರತಿಯೊಬ್ಬ ಪ್ರಯಾಣಿಕರೂ ಹಾರಾಟಕ್ಕೂ ಮುನ್ನ ಕಡ್ಡಾಯ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಅವುಗಳನ್ನು ಪಾಲಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ವಿಮಾನವನ್ನು ಹಾರಾಟಕ್ಕೆ ಅನುಮತಿಸುವುದು ಸಾಧ್ಯವಿಲ್ಲ.

ಅಂತಿಮವಾಗಿ ಶುಕ್ರವಾರ ರಾತ್ರಿ 10:49ಕ್ಕೆ ವಿಕ್ಟೋರಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹೊರಟು, ಮರುದಿನ ಬೆಳಗ್ಗೆ 6:16ಕ್ಕೆ ಟೊರೊಂಟೋ ತಲುಪಿತು.

ಒಬ್ಬ ಮಗುವಿನ ಸೀಟ್ ಬೆಲ್ಟ್ ಹಠದಿಂದಾಗಿ ವಿಮಾನ ರದ್ದಾಗಿ, ಉಳಿದ ಪ್ರಯಾಣಿಕರೂ ಅನಿರೀಕ್ಷಿತವಾಗಿ ರಾತ್ರಿ ಕಳೆಯಬೇಕಾದ ಪ್ರಸಂಗ ಇದೀಗ ಗಮನ ಸೆಳೆದಿದೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW