ನಕ್ಸಲ್ ಪೀಡಿತ ಪ್ರದೇಶಗಳಿಗೆ ವಿದೇಶಿ ನಿಧಿ ಹರಿವು ಆರೋಪ; ಅಮೆರಿಕದ ಮಿಷನರಿ ಸಂಸ್ಥೆ ವಿರುದ್ಧ ಯುಎಪಿಎ ಪ್ರಕರಣ


                                         ಸಾಂದರ್ಭಿಕ ಚಿತ್ರ

ಬೆಂಗಳೂರು: ಅಮೆರಿಕ ಮೂಲದ ಕ್ರೈಸ್ತ ಮಿಷನರಿ ಸಂಸ್ಥೆ ಟಿಮೋತಿ ಇನಿಷಿಯೇಟಿವ್ (TTI) ಹಾಗೂ ಅದರೊಂದಿಗೆ ಸಂಬಂಧ ಹೊಂದಿರುವ ಕೆಲವರ ವಿರುದ್ಧ ಬೆಂಗಳೂರು ಪೊಲೀಸರು ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಸೇರಿದಂತೆ ವಿವಿಧ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಿದ್ದಾರೆ.

ಜೂನ್ 11ರಂದು ದಾಖಲಾದ ಎಫ್‌ಐಆರ್ ಪ್ರಕಾರ, ವಿದೇಶಿ ಡೆಬಿಟ್ ಕಾರ್ಡ್‌ಗಳ ಮೂಲಕ ಕೋಟ್ಯಂತರ ರೂಪಾಯಿ ಹಣವನ್ನು ಅಕ್ರಮವಾಗಿ ಭಾರತಕ್ಕೆ ತರಲಾಗಿದ್ದು, ಅದರ ಒಂದು ಭಾಗವನ್ನು ನಕ್ಸಲ್ ಪೀಡಿತ ಪ್ರದೇಶಗಳಿಗೆ ಹರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರಕರಣದಲ್ಲಿ ಜೋನಾಥನ್ ನೀಲ್ಮಾರ್ಕ್, ವರ್ಗೀಸ್ ಮ್ಯಾಥ್ಯೂ, ವರ್ಗೀಸ್ ಚಾಕೊ, ಬಾಬು ಕುರಿಯನ್, ಸುಪ್ರೀಂ ಜಾಯ್ ಸೇರಿದಂತೆ ಹಲವರ ಹೆಸರನ್ನು ಉಲ್ಲೇಖಿಸಲಾಗಿದ್ದು, ಟಿಟಿಐ ಯುಎಸ್‌ಎ ಸಂಸ್ಥೆಯನ್ನೂ ಪ್ರತಿಪಕ್ಷವಾಗಿ ಸೇರಿಸಲಾಗಿದೆ.

ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದ ವೇಳೆ ಹಲವು ವಿದೇಶಿ ಡೆಬಿಟ್ ಕಾರ್ಡ್‌ಗಳು ಪತ್ತೆಯಾಗಿದ್ದವು ಎನ್ನಲಾಗಿದೆ. ತನಿಖೆಯ ವೇಳೆ ದೇಶದ ವಿವಿಧ ಭಾಗಗಳಲ್ಲಿ ಈ ಕಾರ್ಡ್‌ಗಳನ್ನು ಬಳಸಿ ದೊಡ್ಡ ಪ್ರಮಾಣದ ಹಣ ವಹಿವಾಟು ನಡೆಸಿರುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಚತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕೋಟ್ಯಂತರ ರೂಪಾಯಿ ಹಣ ಎಟಿಎಂ ಮೂಲಕ ಹಿಂಪಡೆಯಲಾಗಿದೆ ಎಂಬ ಆರೋಪವೂ ದಾಖಲಾಗಿದೆ. ತರಬೇತಿ ಹಾಗೂ ಪ್ರಚಾರ ಕಾರ್ಯಕ್ರಮಗಳ ಹೆಸರಿನಲ್ಲಿ ಈ ಹಣವನ್ನು ಬಳಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಇದಲ್ಲದೆ, FCRA ಹಾಗೂ FEMA ನಿಯಮಗಳನ್ನು ಉಲ್ಲಂಘಿಸಿ ವಿದೇಶಿ ನಿಧಿಯನ್ನು ಬಳಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಜಾರಿ ನಿರ್ದೇಶನಾಲಯ (ED) ನಡೆಸಿದ ತನಿಖೆಯ ಬಳಿಕ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಗಳ ಸತ್ಯಾಸತ್ಯತೆ ಕುರಿತು ಅಂತಿಮ ನಿರ್ಧಾರ ತನಿಖೆ ಮತ್ತು ನ್ಯಾಯಾಲಯದ ವಿಚಾರಣೆಯ ಬಳಿಕವೇ ಸ್ಪಷ್ಟವಾಗಲಿದೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW