ಲೆಬನಾನ್‌ನಲ್ಲಿ ಮರಿಯಮ್ಮನವರ ಪ್ರತಿಮೆ ಅವಮಾನ ಆರೋಪ ವೈರಲ್ ಚಿತ್ರಗಳಿಗೆ ವಿಶ್ವ ಕ್ಯಾಥೋಲಿಕ್ ಸಮುದಾಯದಲ್ಲಿ ತೀವ್ರ ಆಕ್ರೋಶ



ಬೈರೂತ್ / ಲೆಬನಾನ್:ಯುದ್ಧದ ಗಾಯಗಳಿಂದ ಕಂಗೆಟ್ಟಿರುವ ಲೆಬನಾನ್‌ನಲ್ಲಿ ಇದೀಗ ಮತ್ತೊಂದು ಘಟನೆ ವಿಶ್ವದ ಕ್ರೈಸ್ತ ಸಮುದಾಯವನ್ನು ತೀವ್ರವಾಗಿ ನೋಯಿಸಿದೆ. ಕ್ರೈಸ್ತ ಬಹುಸಂಖ್ಯಾತ ಪ್ರದೇಶವೆಂದು ಪರಿಗಣಿಸಲ್ಪಡುವ ದಬೆಲ್ ಪಟ್ಟಣದಲ್ಲಿ ಕನ್ಯಾ ಮರಿಯಮ್ಮನವರ ಪ್ರತಿಮೆಗೆ ಅವಮಾನ ಮಾಡಿರುವ ಆರೋಪ ಕೇಳಿಬಂದಿದ್ದು, ಸಂಬಂಧಿಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಹರಿದಾಡುತ್ತಿರುವ ಚಿತ್ರಗಳಲ್ಲಿ ಸೈನಿಕನೊಬ್ಬ ಕನ್ಯಾ ಮರಿಯಮ್ಮನವರ ವಿಗ್ರಹದ ಬಾಯಿಗೆ ಸಿಗರೇಟ್ ಒತ್ತಿಹಿಡಿದು ಅಪಹಾಸ್ಯ ಮಾಡುತ್ತಿರುವಂತೆ ಕಾಣುತ್ತದೆ. ಈ ದೃಶ್ಯಗಳು ವಿಶ್ವದಾದ್ಯಂತದ ಕ್ಯಾಥೋಲಿಕ್ ಹಾಗೂ ಕ್ರೈಸ್ತ ವಿಶ್ವಾಸಿಗಳ ಮನಸ್ಸಿಗೆ ಆಳವಾದ ನೋವುಂಟುಮಾಡಿವೆ. “ಪವಿತ್ರತೆಯ ಸಂಕೇತವಾಗಿರುವ ಮರಿಯಮ್ಮನವರ ಪ್ರತಿಮೆಯನ್ನು ಅವಹೇಳನ ಮಾಡಿರುವುದು ವಿಶ್ವಾಸಿಗಳ ಭಾವನೆಗಳಿಗೆ ಗಂಭೀರ ಧಕ್ಕೆ” ಎಂದು ಹಲವು ಧಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಇದೇ ವೇಳೆ, ಯೇಸು ಕ್ರಿಸ್ತನ ಪ್ರತಿಮೆಯನ್ನು ಧ್ವಂಸಗೊಳಿಸುತ್ತಿರುವಂತೆ ಕಾಣುವ ಮತ್ತಷ್ಟು ದೃಶ್ಯಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಯುದ್ಧದ ನಡುವೆಯೂ ಧಾರ್ಮಿಕ ಚಿಹ್ನೆಗಳು ಮತ್ತು ಆರಾಧನಾ ಸ್ಥಳಗಳಿಗೆ ಗೌರವ ನೀಡಬೇಕು ಎಂಬ ಆಗ್ರಹ ಅಂತರಾಷ್ಟ್ರೀಯ ಮಟ್ಟದಲ್ಲಿ ಕೇಳಿಬರುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಹಲವು ಕ್ರೈಸ್ತ ಸಂಘಟನೆಗಳು ಹಾಗೂ ಮಾನವ ಹಕ್ಕು ಕಾರ್ಯಕರ್ತರು ತೀವ್ರ ಖಂಡನೆ ವ್ಯಕ್ತಪಡಿಸಿದ್ದು, “ಶಾಂತಿ ನೆಲೆಸಬೇಕಾದ ಪ್ರದೇಶಗಳಲ್ಲಿ ಧಾರ್ಮಿಕ ಅವಮಾನಗಳು ದ್ವೇಷ ಮತ್ತು ವಿಭಜನೆಗೆ ಕಾರಣವಾಗುತ್ತವೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವದ ವಿವಿಧ ಭಾಗಗಳ ವಿಶ್ವಾಸಿಗಳು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ನೋವು ಮತ್ತು ಆಕ್ರೋಶವನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಸ್ರೇಲಿ ಸೇನೆ, ಪ್ರಕರಣವನ್ನು ಪರಿಶೀಲಿಸಲಾಗುವುದು ಹಾಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವುದಾಗಿ ವರದಿಗಳು ಹೇಳುತ್ತಿವೆ. ಆದರೆ ಈ ಘಟನೆ ಈಗಾಗಲೇ ವಿಶ್ವದ ಕ್ರೈಸ್ತ ಸಮುದಾಯದ ಮನಸ್ಸಿನಲ್ಲಿ ಆಳವಾದ ಗಾಯ ಮೂಡಿಸಿದೆ.

ಯುದ್ಧದ ಸಂದರ್ಭದಲ್ಲಿಯೂ ಧಾರ್ಮಿಕ ನಂಬಿಕೆಗಳು, ಆರಾಧನಾ ಚಿಹ್ನೆಗಳು ಹಾಗೂ ಮಾನವೀಯ ಮೌಲ್ಯಗಳಿಗೆ ಗೌರವ ನೀಡಬೇಕು ಎಂದು ಧಾರ್ಮಿಕ ನಾಯಕರು ಮತ್ತು ಶಾಂತಿ ಹೋರಾಟಗಾರರು ಆಗ್ರಹಿಸಿದ್ದಾರೆ. “ಧರ್ಮವನ್ನು ಅವಮಾನಿಸುವುದು ಶಾಂತಿಗೆ ದಾರಿ ಮಾಡಿಕೊಡುವುದಿಲ್ಲ; ಪರಸ್ಪರ ಗೌರವವೇ ಮಾನವೀಯತೆಯ ಮೂಲ” ಎಂಬ ಸಂದೇಶಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW