ಲಿವಿಂಗ್ ಟುಗೆದರ್ ಸಂಬಂಧಕ್ಕೂ ನೋಂದಣಿ ಕಡ್ಡಾಯ, ಬಹುಪತ್ನಿತ್ವಕ್ಕೆ ನಿಷೇಧ; ಅಸ್ಸಾಂ ಏಕ ನಾಗರಿಕ ಸಂಹಿತೆ ಮಸೂದೆ ಮಂಡನೆ


ಗುವಾಹಟಿ:
ದೇಶದಲ್ಲಿ ಏಕ ನಾಗರಿಕ ಸಂಹಿತೆ (UCC) ಜಾರಿಗೆ ತರುವ ನಿಟ್ಟಿನಲ್ಲಿ ಅಸ್ಸಾಂ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದ್ದು, ವಿಧಾನಸಭೆಯಲ್ಲಿ ಏಕ ನಾಗರಿಕ ಸಂಹಿತೆ ಮಸೂದೆಯನ್ನು ಮಂಡಿಸಿದೆ. ಉತ್ತರಾಖಂಡ್ ಮತ್ತು ಗುಜರಾತ್ ಬಳಿಕ ಈ ಮಸೂದೆಯನ್ನು ಮಂಡಿಸಿದ ಮೂರನೇ ರಾಜ್ಯವಾಗಿ ಅಸ್ಸಾಂ ಹೊರಹೊಮ್ಮಿದೆ.

        ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಸರ್ಕಾರದ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವ ಅತುಲ್ ಬೋರಾ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿದರು.

            ವಿವಾಹ, ವಿಚ್ಛೇದನ, ಆಸ್ತಿ ಹಕ್ಕು, ಲಿವಿಂಗ್ ಟುಗೆದರ್ ಸಂಬಂಧಗಳಂತಹ ವಿಷಯಗಳಿಗೆ ಏಕೀಕೃತ ಕಾನೂನು ರೂಪುರೇಷೆ ನೀಡುವುದು ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ. ಬಹುಪತ್ನಿತ್ವವನ್ನು ಸಂಪೂರ್ಣವಾಗಿ ನಿಷೇಧಿಸುವ ಅಂಶವನ್ನೂ ಮಸೂದೆಯಲ್ಲಿ ಸೇರಿಸಲಾಗಿದೆ.

           ಪುರುಷರಿಗೆ 21 ವರ್ಷ ಹಾಗೂ ಮಹಿಳೆಯರಿಗೆ 18 ವರ್ಷಗಳನ್ನು ಕನಿಷ್ಠ ವಿವಾಹ ವಯಸ್ಸಾಗಿ ನಿಗದಿಪಡಿಸಲಾಗಿದೆ. ಜೊತೆಗೆ, ಲಿವಿಂಗ್ ಟುಗೆದರ್ ಸಂಬಂಧಗಳನ್ನು ಒಂದು ತಿಂಗಳೊಳಗೆ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

             ಇಂತಹ ಸಂಬಂಧಗಳಿಂದ ಜನಿಸುವ ಮಕ್ಕಳಿಗೆ ಕಾನೂನುಬದ್ಧ ಹಕ್ಕುಗಳನ್ನು ಖಚಿತಪಡಿಸುವುದರ ಜೊತೆಗೆ, ಎಲ್ಲಾ ಧರ್ಮಗಳ ಮಹಿಳೆಯರಿಗೆ ಕುಟುಂಬದ ಆಸ್ತಿಯಲ್ಲಿ ಸಮಾನ ಹಕ್ಕು ದೊರೆಯುವಂತೆ ಮಾಡುವುದಾಗಿ ಮಸೂದೆಯಲ್ಲಿ ತಿಳಿಸಲಾಗಿದೆ.

           ಆದರೆ, ಆದಿವಾಸಿ ಸಮುದಾಯಗಳನ್ನು ಈ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ವರದಿಗಳು ತಿಳಿಸಿವೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW