ವಾಷಿಂಗ್ಟನ್: ಅಮೆರಿಕನ್ ಬೈಬಲ್ ಸೊಸೈಟಿ ಕಳೆದ ಗುರುವಾರ ಪ್ರಕಟಿಸಿದ ‘ಸ್ಟೇಟ್ ಆಫ್ ದ ಬೈಬಲ್: ಯುಎಸ್‌ಎ 2026’ ವರದಿಯ ‘ಪೇರಂಟಿಂಗ್ ವಿತ್ ದ ಬೈಬಲ್’ ಅಧ್ಯಾಯದಲ್ಲಿ ಆತಂಕಕಾರಿ ಅಂಕಿಅಂಶಗಳು ಬಹಿರಂಗವಾಗಿವೆ.
ಅಧ್ಯಯನದ ಪ್ರಕಾರ, ಅಮೆರಿಕಾದಲ್ಲಿ ಕೇವಲ 29 ಶೇಕಡಾ ಪೋಷಕರು ಮಾತ್ರ ತಮ್ಮ ಮಕ್ಕಳೊಂದಿಗೆ ಪ್ರತಿದಿನ (16%) ಅಥವಾ ನಿಯಮಿತವಾಗಿ (13%) ಪ್ರಾರ್ಥಿಸುತ್ತಿದ್ದಾರೆ. ಉಳಿದವರಲ್ಲಿ 21 ಶೇಕಡಾ ಜನ ಕೆಲವೊಮ್ಮೆ ಮಾತ್ರ ಪ್ರಾರ್ಥಿಸುತ್ತಾರೆ. 15 ಶೇಕಡಾ ಜನ ಅಪರೂಪವಾಗಿ ಪ್ರಾರ್ಥಿಸುವರೆಂದರೆ, 35 ಶೇಕಡಾ ಪೋಷಕರು ಮಕ್ಕಳೊಂದಿಗೆ ಎಂದಿಗೂ ಪ್ರಾರ್ಥನೆ ಮಾಡುವುದಿಲ್ಲವೆಂದು ಸಮೀಕ್ಷೆ ತಿಳಿಸಿದೆ.
ಆಧುನಿಕ ಯುಗದಲ್ಲಿ ಮಕ್ಕಳಿಗೆ ಆಧ್ಯಾತ್ಮಿಕ ಅಡಿಪಾಯ ಕಳೆದುಹೋಗಲು ಇದು ಕಾರಣವಾಗುವುದಿಲ್ಲವೇ ಎಂಬ ಚಿಂತೆ ವ್ಯಕ್ತವಾಗಿದೆ.
ಪೋಷಕರಿಗೆ ಬೈಬಲ್ ಬಗ್ಗೆ ಆಸಕ್ತಿ ಇದ್ದರೂ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಅಮೆರಿಕನ್ ಬೈಬಲ್ ಸೊಸೈಟಿಯ ಇನ್ನೋವೇಶನ್ ಅಧಿಕಾರಿ ಜಾನ್ ಫಾರ್ಕ್ಹರ್ ಪ್ಲೇಕ್ ತಿಳಿಸಿದ್ದಾರೆ. ಉದ್ಯೋಗದ ಒತ್ತಡ, ಕುಟುಂಬದ ಜವಾಬ್ದಾರಿಗಳು ಹಾಗೂ ಮಕ್ಕಳನ್ನು ಬೆಳೆಸುವ ಕಠಿಣ ಪರಿಶ್ರಮದಿಂದ ಅವರು ತುಂಬಾ ದಣಿದು ಹೋಗುತ್ತಿರುವುದೇ ಇದಕ್ಕೆ ಕಾರಣವೆಂದು ಅವರು ಹೇಳಿದ್ದಾರೆ.
ಆದರೆ, ನಿಯಮಿತವಾಗಿ ಚರ್ಚಿಗೆ ಹೋಗಿ ತಮ್ಮ ನಂಬಿಕೆಗೆ ಮಹತ್ವ ನೀಡುವ ನಿಜವಾದ ಕ್ರೈಸ್ತರಲ್ಲಿ 72 ಶೇಕಡಾ ಪೋಷಕರು ತಮ್ಮ ಮಕ್ಕಳೊಂದಿಗೆ ಪ್ರತಿದಿನ ಅಥವಾ ನಿಯಮಿತ ಅವಧಿಯಲ್ಲಿ ಪ್ರಾರ್ಥಿಸುತ್ತಿರುವುದು ಆಶಾದಾಯಕ ಸಂಗತಿಯಾಗಿದೆ.
