ಕುಶಾಲನಗರ, ಮೇ 18: ದುಬಾರೆ ಆನೆ ಶಿಬಿರದಲ್ಲಿ ಎಲಿಫೆಂಟ್ ಬಾತಿಂಗ್ ವೀಕ್ಷಣೆ ವೇಳೆ ನಡೆದ ದುರ್ಘಟನೆಯಲ್ಲಿ ಚೆನ್ನೈ ಪಲ್ಲಾವರಂ ಮೂಲದ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಜಿನ್ಮು (33) ಎಂದು ಗುರುತಿಸಲಾಗಿದೆ. ಎಲಿಫೆಂಟ್ ಬಾತಿಂಗ್ ಸಂದರ್ಭ ಸಾಕಾನೆ ಏಕಾಏಕಿ ಮಹಿಳೆಯ ಮೈಮೇಲೆ ಬಿದ್ದ ಪರಿಣಾಮ ಅವರು ಆನೆಯ ಅಡಿ ಸಿಲುಕಿ ಸ್ಥಳದಲ್ಲೇ ದುರ್ಮರಣಕ್ಕೀಡಾದರು ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಜಿನ್ಮು ಅವರ ಪತಿ ಜೋಯಲ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದುಬಾರೆ ಶಿಬಿರಕ್ಕೆ ಭೇಟಿ ನೀಡಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಘಟನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
