ಬೈಬಲ್ ಇಟ್ಟು ಶವದ ಪಕ್ಕದಲ್ಲೇ 5 ದಿನ ಪ್ರಾರ್ಥಿಸಿದ ತಾಯಿ; ಮಧ್ಯಪ್ರದೇಶದಲ್ಲಿ ಮನಕಲಕುವ ಘಟನೆ


ವಿದಿಶಾ (ಮಧ್ಯಪ್ರದೇಶ):
ಮನಸ್ಸನ್ನು ಮಿಡಿಯಿಸುವ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ಬೆಳಕಿಗೆ ಬಂದಿದೆ. 42 ವರ್ಷದ ಶೀನು ವರ್ಗೀಸ್ ಅವರ ಮೃತದೇಹದ ಪಕ್ಕದಲ್ಲೇ ತಾಯಿ ಮರಿಯಮ್ಮ ವರ್ಗೀಸ್ ಐದು ದಿನಗಳ ಕಾಲ ಕುಳಿತು ಪ್ರಾರ್ಥಿಸುತ್ತಿದ್ದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. “ನನ್ನ ಮಗ ಮತ್ತೆ ಜೀವಂತನಾಗುತ್ತಾನೆ” ಎಂಬ ಅಚಲ ನಂಬಿಕೆಯಲ್ಲಿ ಅವರು ಬೈಬಲ್ ಇಟ್ಟು ನಿರಂತರವಾಗಿ ಪ್ರಾರ್ಥಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಶೀನು ವರ್ಗೀಸ್ ಅವರ ಎದೆಯ ಮೇಲೆ ಬೈಬಲ್ ಇಡಲಾಗಿದ್ದು, ಕೋಣೆಯ ಸುತ್ತಮುತ್ತ ಪ್ರಾರ್ಥನೆಗೆ ಸಂಬಂಧಿಸಿದ ವಸ್ತುಗಳು ಕಂಡುಬಂದಿವೆ. ಮನೆಯಿಂದ ತೀವ್ರ ದುರ್ವಾಸನೆ ಬರುತ್ತಿರುವುದು ಹಾಗೂ ಬಾಗಿಲಿನ ಕೆಳಭಾಗದಿಂದ ರಕ್ತ ಹರಿಯುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಈ ದಾರುಣ ಘಟನೆ ಬೆಳಕಿಗೆ ಬಂದಿದೆ.

ಸಿವಿಲ್ ಲೈನ್ ಪೊಲೀಸ್ ಠಾಣೆಯ ಮಾಹಿತಿ ಪ್ರಕಾರ, ಶೀನು ಮುಂಬೈನಲ್ಲಿ ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದರು. ತಂದೆಯ ನಿಧನದ ಬಳಿಕ ಕಳೆದ ಒಂದು ವರ್ಷದಿಂದ ತಾಯಿ ಮರಿಯಮ್ಮ ಅವರೊಂದಿಗೆ ವಿದಿಶಾದಲ್ಲಿ ವಾಸಿಸುತ್ತಿದ್ದರು. ಮರಿಯಮ್ಮ ಖಾಸಗಿ ಶಾಲೆಯ ನಿವೃತ್ತ ಶಿಕ್ಷಕಿಯಾಗಿದ್ದಾರೆ.

ಸೋಮವಾರ ಬೆಳಿಗ್ಗೆ ಹಾಲು ತಲುಪಿಸಲು ಬಂದಿದ್ದ ಹಾಲು ಮಾರಾಟಗಾರ ಸಚಿನ್ ಲೋಧಿ, ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಹಾಗೂ ರಕ್ತದ ಗುರುತುಗಳನ್ನು ಗಮನಿಸಿ ಅನುಮಾನ ವ್ಯಕ್ತಪಡಿಸಿದ್ದಾರೆ. ವಿಚಾರಿಸಿದಾಗ, “ಎಲ್ಲರೂ ಸೇರಿ ನನ್ನ ಮಗನನ್ನು ಕೊಂದಿದ್ದಾರೆ... ಶೀನು ಸತ್ತಿದ್ದಾನೆ” ಎಂದು ಮರಿಯಮ್ಮ ಹೇಳಿದ್ದಾಗಿ ವರದಿಯಾಗಿದೆ.

ನೆರೆಹೊರೆಯವರ ಪ್ರಕಾರ, ಕಳೆದ ಕೆಲವು ದಿನಗಳಿಂದ ಪ್ರದೇಶದಲ್ಲಿ ದುರ್ವಾಸನೆ ಹರಡುತ್ತಿದ್ದರೂ, ಹತ್ತಿರದಲ್ಲಿ ಯಾವುದೋ ಪ್ರಾಣಿ ಸಾವನ್ನಪ್ಪಿರಬಹುದು ಎಂದು ನಿವಾಸಿಗಳು ಭಾವಿಸಿದ್ದರು. ಮರಿಯಮ್ಮ ಎಂದಿನಂತೆ ತಮ್ಮ ದಿನಚರಿಯಲ್ಲಿ ತೊಡಗಿಸಿಕೊಂಡಿದ್ದರಿಂದ ಮನೆಯೊಳಗೆ ಇಂತಹ ದಾರುಣ ಘಟನೆ ನಡೆದಿದೆ ಎಂಬ ಅನುಮಾನ ಯಾರಿಗೂ ಬಂದಿರಲಿಲ್ಲ.

ಶೀನು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಅವರ ಇಬ್ಬರು ಸಹೋದರರು ವಿದೇಶದಲ್ಲಿ ವಾಸಿಸುತ್ತಿದ್ದು, ತಾಯಿಯನ್ನು ನೋಡಿಕೊಳ್ಳಲು ಶೀನು ಅವರೊಂದಿಗೇ ಉಳಿದಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಪೊಲೀಸರು ಮನೆಗೆ ಪ್ರವೇಶಿಸಲು ಯತ್ನಿಸಿದಾಗ ಮರಿಯಮ್ಮ ಅವರನ್ನು ತಡೆಯಲು ಪ್ರಯತ್ನಿಸಿದ್ದು, ಎರಡು ಬಾರಿ ಬಾಗಿಲು ಮುಚ್ಚಲು ಸಹ ಯತ್ನಿಸಿದ್ದಾರೆ ಎನ್ನಲಾಗಿದೆ. ಬಳಿಕ ಸಾಕಷ್ಟು ಮನವೊಲಿಸಿದ ನಂತರ ಪೊಲೀಸರು ಒಳಗೆ ಪ್ರವೇಶಿಸಿದರು.

ಪೊಲೀಸರ ಪ್ರಕಾರ, ಶವವು ಸುಮಾರು ಐದು ದಿನಗಳಷ್ಟು ಹಳೆಯದಾಗಿದ್ದು, ದೇಹದಿಂದ ತೀವ್ರ ದುರ್ವಾಸನೆ ಬರುತ್ತಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಸಿವಿಲ್ ಲೈನ್ ಪೊಲೀಸ್ ಠಾಣೆಯ ಉಸ್ತುವಾರಿ ರಾಜ್‌ಪಾಲ್ ಸಿಂಗ್ ಜದೌನ್ ತಿಳಿಸಿದ್ದಾರೆ.

ಪ್ರಸ್ತುತ ಮರಿಯಮ್ಮ ವರ್ಗೀಸ್ ಅವರ ಮೇಲೆ ನಿಗಾ ಇಡಲಾಗಿದ್ದು, ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW