ಸಾಲೆಂ: ಧಾರ್ಮಿಕ ವಿಶ್ವಾಸವನ್ನು ಕಾಪಾಡಿಕೊಳ್ಳಲು ತೆಗೆದುಕೊಂಡ ನಿರ್ಧಾರದಿಂದಾಗಿ ಶಿಕ್ಷಕಿಗೆ ಅಮಾನತು ವಿಧಿಸಿರುವ ಘಟನೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಅಮೆರಿಕದ ಓಹಿಯೋ ರಾಜ್ಯದ ಸಾಲೆಂ ನಗರದಲ್ಲಿರುವ ಸೌತ್ ಈಸ್ಟ್ ಎಲಿಮೆಂಟರಿ ಶಾಲೆಯ ವಿಜ್ಞಾನ ಶಿಕ್ಷಕಿ ಶಾವ್ಲಿ ಕಾರ್ಲಿಸ್ಲ್ ಅವರಿಗೆ, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ರಜೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಐದು ದಿನಗಳ ವೇತನವಿಲ್ಲದ ಅಮಾನತು ವಿಧಿಸಲಾಗಿದೆ.
ಶಾವ್ಲಿ ಕಾರ್ಲಿಸ್ಲ್ ಅವರು ಚರ್ಚ್ ಆಫ್ ಗಾಡ್ ಸಭೆಯ ಸದಸ್ಯೆಯಾಗಿದ್ದು, ಕಳೆದ 15 ವರ್ಷಗಳಿಂದ ತಮ್ಮ ಧಾರ್ಮಿಕ ಆಚರಣೆಗಳಿಗೆ ನಿಯಮಿತವಾಗಿ ರಜೆ ಪಡೆಯುತ್ತಿದ್ದರು. ಆದರೆ 2025ರ ಅಕ್ಟೋಬರ್‌ನಲ್ಲಿ, ಮುಂಚಿತವಾಗಿ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದರೂ ಸಹ, ಶಾಲಾ ಆಡಳಿತವು ಅವರಿಗೆ ರಜೆ ನೀಡಲು ನಿರಾಕರಿಸಿತು.
ರಜೆ ನಿರಾಕರಿಸಿದರೂ ತಮ್ಮ ವಿಶ್ವಾಸದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧರಿರದ ಅವರು, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದರಿಂದಾಗಿ ಶಾಲಾ ಆಡಳಿತವು ಶಿಸ್ತಿನ ಕ್ರಮವಾಗಿ ಅಮಾನತು ಶಿಕ್ಷೆಯನ್ನು ವಿಧಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಿಕ್ಷಕಿ, “ದೇವರ ಆಜ್ಞೆ ಮತ್ತು ಮಾನವರ ನಿಯಮಗಳ ನಡುವೆ ಸಂಘರ್ಷ ಉಂಟಾದರೆ, ನಾನು ದೇವರನ್ನೇ ಅನುಸರಿಸುತ್ತೇನೆ” ಎಂದು ಹೇಳಿದ್ದಾರೆ. ತಮ್ಮ ಧಾರ್ಮಿಕ ನಂಬಿಕೆಯನ್ನು ಬಿಟ್ಟುಬಿಡಲು ಸಾಧ್ಯವಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.
ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲೂ ಹಾಗೂ ಕ್ರೈಸ್ತ ಸಮುದಾಯದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.
ನಂಬಿಕೆ ದೊಡ್ಡದಾ? ಉದ್ಯೋಗ ದೊಡ್ಡದಾ? ಎಂಬ ಪ್ರಶ್ನೆ ಮತ್ತೆ ಮುಂದಿಟ್ಟಿದೆ.
