ಬೆಂಗಳೂರು:2025-26ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ–1ರ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ರಾಜ್ಯದಲ್ಲಿ ಶೇ. 86.48ರಷ್ಟು ಉತ್ತೀರ್ಣ ಪ್ರಮಾಣ ದಾಖಲಾಗಿದೆ. ಇದು ರಾಜ್ಯದ ಇತಿಹಾಸದಲ್ಲೇ ಅತ್ಯುತ್ತಮ ಫಲಿತಾಂಶವೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಒಟ್ಟು 6,32,200 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 5,46,698 ಮಂದಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ 2,32,928 (83.65%) ಬಾಲಕರು ಹಾಗೂ 3,13,770 (88.70%) ಬಾಲಕಿಯರು ಉತ್ತೀರ್ಣರಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉತ್ತಮ ಸಾಧನೆ ಗಮನಾರ್ಹವಾಗಿದೆ.
ಪರೀಕ್ಷೆ–1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ–2 ಏಪ್ರಿಲ್ 30ರಿಂದ ಪ್ರಾರಂಭವಾಗಿ ಮೇ 13ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳು ಫೇಲ್ ಆದ ವಿಷಯಗಳನ್ನು ಮರುಬರೆಯುವ ಮೂಲಕ ತಮ್ಮ ಫಲಿತಾಂಶವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಈ ಬಾರಿ ಮೂರನೇ ಪರೀಕ್ಷೆ (Exam-3) ನಡೆಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಫಲಿತಾಂಶದ ಬಗ್ಗೆ ಅನುಮಾನ ಇರುವ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ ಹಾಗೂ ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಏಪ್ರಿಲ್13ರಿಂದ 19ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಪ್ರತಿ ವಿಷಯಕ್ಕೆ ₹1670 ಶುಲ್ಕ ನಿಗದಿಪಡಿಸಲಾಗಿದೆ.
